ಹೈದರಾಬಾದ್ (ತೆಲಂಗಾಣ):ಬೇಸಿಗೆ ಆರಂಭವಾಗಿದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುವ ಅಗತ್ಯವಿದೆ. ಚಳಿಗಾಲದಲ್ಲಿ ಒಂದು ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡಿದರೆ, ಬೇಸಿಗೆಯಲ್ಲಿ ಬೇರೊಂದು ರೀತಿಯ ಆರೋಗ್ಯ ತೊಂದರೆಗಳು ಬಾಧಿಸುತ್ತವೆ. ತೆಲಂಗಾಣ ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಗರಿಷ್ಠ ತಾಪಮಾನ ದಾಖಲಾಗುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವು ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಎರಡು ಡಿಗ್ರಿಗಳಷ್ಟು ಹೆಚ್ಚಾಗುತ್ತದೆ. ಈಗಾಗಲೇ ವಿವಿಧ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಗುರುವಾರ ಕಾಮರೆಡ್ಡಿ ಜಿಲ್ಲೆಯ ಭಿಕ್ಕನೂರ್ ಮಂಡಲದಲ್ಲಿ ರಾಜ್ಯದ ಅತಿ ಹೆಚ್ಚು ತಾಪಮಾನ 43.8 ಡಿಗ್ರಿ ದಾಖಲಾಗಿದೆ. ರಾಜಣ್ಣ-ಸಿರಿಸಿಲ್ಲ, ನಿಜಾಮಾಬಾದ್, ಸಿದ್ದಿಪೇಟೆ, ನಲ್ಗೊಂಡ, ಜಗಿತ್ಯಾಲ, ಆದಿಲಾಬಾದ್, ಮಹಬೂಬನಗರ, ಜೋಗುಲಾಂಬ-ಗದ್ವಾಲ, ವಿಕಾರಾಬಾದ್, ಯಾದಾದ್ರಿ-ಭುವನಗಿರಿ, ಕುಮುರಭೀಮ್-ಆಸಿಫಾಬಾದ್, ಜನಗಾಂ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ 40 ಡಿಗ್ರಿಗಿಂತ ಹೆಚ್ಚಿನ ತಾಪಮಾನವಿತ್ತು.
ಆರೆಂಜ್, ಯೆಲ್ಲೋ ಅಲರ್ಟ್: ಶುಕ್ರವಾರದಿಂದ ಏಪ್ರಿಲ್ 3ರವರೆಗೆ ಏಳು ಜಿಲ್ಲೆಗಳಲ್ಲಿ ಜನರು ಎಚ್ಚರದಿಂದಿರಬೇಕು ಎಂದು ಇಲಾಖೆ ಹೇಳಿದೆ. ಆದಿಲಾಬಾದ್, ಕುಮುರಭೀಮ್-ಆಸಿಫಾಬಾದ್, ಮಂಚಿರ್ಯಾಲ, ನಾರಾಯಣಪೇಟೆ, ವನಪರ್ತಿ, ಜೋಗುಲಾಂಬ-ಗದ್ವಾಲ ಮತ್ತು ನಾಗರಕರ್ನೂಲ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಜಿಲ್ಲೆಗಳಲ್ಲಿ ಹವಾಮಾನದ ಮೇಲೆ ನಿಗಾ ಇಡಬೇಕು ಎಂದು ಸೂಚಿಸಲಾಗಿದೆ.