ಚೆನ್ನೈ (ತಮಿಳುನಾಡು): ತಮಿಳುನಾಡಿನ ನಾಗಪಟ್ಟಣಂ ಹಾಗೂ ಶ್ರೀಲಂಕಾದ ಕಂಕಸಂತುರೈ ನಡುವಿನ ಪ್ರಯಾಣಿಕರ ಹೈಸ್ಪೀಡ್ ದೋಣಿ ಸೇವೆ 40 ವರ್ಷಗಳ ನಂತರ ಪುನರಾರಂಭಗೊಂಡಿದೆ. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್, ತಮಿಳುನಾಡು ಲೋಕೋಪಯೋಗಿ ಮತ್ತು ಬಂದರು ಸಚಿವ ಇ.ವಿ. ವೇಲು ಶನಿವಾರ ನಾಗಪಟ್ಟಣಂ ಬಂದರಿನಿಂದ ದೋಣಿ ಸೇವೆಗೆ ಚಾಲನೆ ನೀಡಿದರು.
ತಮಿಳುನಾಡು ಮತ್ತು ಶ್ರೀಲಂಕಾದ ಉತ್ತರ ಪ್ರಾಂತ್ಯದ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಈ ದೋಣಿ ಸೇವೆಯ ಕಾರ್ಯಾಚರಣೆ ಹೆಚ್ಚಿಸುತ್ತದೆ. ಅಲ್ಲದೇ, ನಾಗಪಟ್ಟಣಂ ಸಮೀಪದಲ್ಲಿರುವ ತಿರುವನಲ್ಲೂರು, ನಾಗೂರ್ ಮತ್ತು ವೆಲಂಕಣಿಯಂತಹ ಧಾರ್ಮಿಕ ಕೇಂದ್ರಗಳಿಗೆ ಶ್ರೀಲಂಕಾದಿಂದ ಹಲವಾರು ಯಾತ್ರಾರ್ಥಿಗಳು ಭೇಟಿ ನೀಡಲು ಅನುಕೂಲವಾಗಲಿದೆ ಎಂದು ಸರ್ಬಾನಂದ ಸೋನೊವಾಲ್ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಮತ್ತೊಂದೆಡೆ, ಉಭಯ ರಾಷ್ಟ್ರಗಳ ನಡುವಿನ ಹೈಸ್ಪೀಡ್ ದೋಣಿ ಸೇವೆ ಆರಂಭದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ವಿಡಿಯೋ ಸಂದೇಶಗಳ ಮೂಲಕ ಶ್ಲಾಘಿಸಿದ್ದಾರೆ. ಈ ದೋಣಿ ಸೇವೆಯು ಭಾರತ ಹಾಗೂ ಶ್ರೀಲಂಕಾ ನಡುವಿನ ಸಾಂಸ್ಕೃತಿಕ, ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಸಂಪರ್ಕವು ಭಾರತ ಹಾಗೂ ಶ್ರೀಲಂಕಾ ಆರ್ಥಿಕ ಪಾಲುದಾರಿಕೆಯ ಜಂಟಿ ದೃಷ್ಟಿಯ ಕೇಂದ್ರ ವಿಷಯವಾಗಿದೆ. ನಾವು ರಾಮೇಶ್ವರಂ ಮತ್ತು ತಲೈಮನ್ನಾರ್ ನಡುವೆ ದೋಣಿ ಸೇವೆಯನ್ನು ಪುನಾರಂಭಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.