ಚಂಡೀಗಢ (ಪಂಜಾಬ್):ಪಂಜಾಬ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ವಿದ್ಯುತ್ ಅವಘಡದ ಪ್ರಕರಣ ಬೆಳಕಿಗೆ ಬರುತ್ತಿದೆ. ವಿದ್ಯುತ್ ಶಾಕ್‌ಗೆ ಹಲವರು ಸಾವನ್ನಪ್ಪಿದ್ದಾರೆ. ಆದರೆ, ದುರಂತದ ಸಂದರ್ಭದಲ್ಲಿ ಮೃತರ ಕುಟುಂಬಸ್ಥರ ಯಾರೂ ಕೈ ಹಿಡಿಯಲು ಸಿದ್ಧರಿಲ್ಲ. ಇಂಧನ ಇಲಾಖೆ ಕೂಡ ಇದರ ಹೊಣೆ ತೆಗೆದುಕೊಳ್ಳುವುದಿಲ್ಲ. ಇದೀಗ ಪಂಜಾಬ್-ಹರಿಯಾಣ ಹೈಕೋರ್ಟ್ ಶುಕ್ರವಾರ, ವಿದ್ಯುತ್ ಪ್ರವಾಹದಿಂದ ಯಾರಾದರೂ ಸಾವನ್ನಪ್ಪಿದರೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಪಂಜಾಬ್ ವಿದ್ಯುತ್ ಇಲಾಖೆಗೆ ಆದೇಶ ಹೊರಡಿಸಿದೆ.
ವಿದ್ಯುತ್ ಅವಘಡದ ಸಂಭವಿಸಿದ 30 ದಿನಗಳಲ್ಲೇ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಉಚ್ಛ ನ್ಯಾಯಾಲಯ ಹೇಳಿದೆ. ಆದರೆ, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯ ಕಂಡುಬಂದರೆ ಮಾತ್ರವೇ ಈ ನಿಯಮ ಅನ್ವಯವಾಗಲಿದೆ ಎಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಳೆದ ಕೆಲವು ದಿನಗಳಿಂದ ಜಲಂಧರ್‌ನಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಹೈಕೋರ್ಟ್‌ನಿಂದ ಆದೇಶ ಹೊರ ಬಂದಿದೆ. ಅಲ್ಲದೇ, ಬಾಕಿ ಇರುವ ಪರಿಹಾರ ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಪಡಿಸಬೇಕು ಎಂದು ಹೇಳಿದೆ. ಇದಕ್ಕೆ ಪಂಜಾಬ್ ಸರ್ಕಾರವು ತನ್ನ ಪ್ರತಿಕ್ರಿಯೆ ಸಲ್ಲಿಸಲು ಹೈಕೋರ್ಟ್‌ನಿಂದ ಸ್ವಲ್ಪ ಸಮಯ ಕೇಳಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
ಕಳೆದ 30 ದಿನಗಳಲ್ಲಿ ಜಲಂಧರ್‌ನಲ್ಲಿ ವಿದ್ಯುತ್ ಅವಘಡದ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ವಿದ್ಯುತ್ ಶಾಕ್‌ನಿಂದ ಜನರು ಮೃತಪಟ್ಟಿದ್ದು, ಈ ಘಟನೆಗಳಲ್ಲಿ ಇಲಾಖೆಯ ತಪ್ಪಿಲ್ಲ ಎಂದು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (Punjab State Power Corporation Limited-PSPCL) ಹೇಳಿತ್ತು. ಮತ್ತೊಂದೆಡೆ, ಹೈಕೋರ್ಟ್‌ನಲ್ಲಿ ವಿದ್ಯುತ್ ಅವಘಡದಲ್ಲಿ ಪರಿಹಾರದ ಕುರಿತು ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಾಕಿ ಉಳಿದಿವೆ. ಈ ಸಂಬಂಧ ನೀತಿಯೊಂದನ್ನು ರೂಪಿಸುವಂತೆ ಪಿಎಸ್ಪಿಸಿಎಲ್ಗೆ ಸೂಚಿಸಿತ್ತು.
ಪಬ್ಲಿಕ್ ಪ್ರಾಸಿಕ್ಯೂಟರ್ ತೇಜ್ ಶರ್ಮಾ, ಅಧಿಕಾರಿಗಳು ಸಿದ್ಧಪಡಿಸಿದ ವರದಿಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದರು. ಈ ಕುರಿತು ಚರ್ಚೆಯ ನಂತರ, ಸರ್ಕಾರಿ ನೌಕರರು, ಗುತ್ತಿಗೆ ನೌಕರರು ಮತ್ತು ಜನರಿಗೆ ಪರಿಹಾರದ ಮೊತ್ತವನ್ನು ನಿಗದಿಪಡಿಸಲು ಆದೇಶವನ್ನು ನೀಡಲಾಗಿದೆ. ಇಲಾಖೆ ಮತ್ತು ಇಲಾಖೆಯ ಉದ್ಯೋಗಿಗಳ ಯಾವುದೇ ರೀತಿಯ ನಿರ್ಲಕ್ಷ್ಯ ಬೆಳಕಿಗೆ ಬಂದರೆ, ಆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿಳಿಸಿದೆ. ಅಲ್ಲದೇ, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಸಾಮಾನ್ಯ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟರೆ ಅಥವಾ ಗಾಯಗೊಂಡರೆ ಕಾರ್ಮಿಕರ ಪರಿಹಾರ ಕಾಯ್ದೆಯಡಿ ಪರಿಹಾರ ನಿಗದಿ ಪಡಿಸಬೇಕೆಂದು ಹೇಳಿದೆ.
ಇದನ್ನೂ ಓದಿ:ರಾಜ್ಯಸಭೆಯಲ್ಲಿ ಆಪ್ ಪಕ್ಷದ ನಾಯಕರಾಗಿ ರಾಘವ್ ಚಡ್ಡಾ ನೇಮಕ