ಅಮರಾವತಿ(ಆಂಧ್ರಪ್ರದೇಶ):ಮನರಂಜನೆ ಹೆಸರಲ್ಲಿ ನಡೆಸಲಾಗುವ ಟಿವಿ ರಿಯಾಲಿಟಿ ಶೋಗಳು ಹದ್ದು ಮೀರುತ್ತಿದ್ದು ಸಭ್ಯತೆ ಕಾಪಾಡಿಕೊಳ್ಳುತ್ತಿಲ್ಲ. ಮಾತು, ನಡೆಯಲ್ಲಿ ಅಶ್ಲೀಲತೆ ಹೆಚ್ಚಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ತೆಲುಗು ಬಿಗ್ಬಾಸ್ ಕಾರ್ಯಕ್ರಮದಲ್ಲಿ ಅಶ್ಲೀಲತೆ ಹೆಚ್ಚಾಗಿದೆ. ಇದನ್ನು ತಡೆಯಬೇಕು ಎಂದು ಕೋರಿ ಮಹಿಳಾ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಯನ್ನು ಸಲ್ಲಿಸಿದ್ದಾರೆ. ರಿಯಾಲಿಟಿ ಶೋನಲ್ಲಿ ಐಬಿಎಫ್ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿಲ್ಲ ಎಂದು ವಕೀಲರು ವಾದಿಸಿದರು. ಸಾಕಷ್ಟು ಅಶ್ಲೀಲತೆ ಪ್ರದರ್ಶನ ಮಾಡಲಾಗುತ್ತಿದೆ. ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಅರ್ಜಿದಾರರ ಪರವಾಗಿ ಪೀಠವನ್ನು ಕೋರಿದರು.