ಗುವಾಹಟಿ:ನಾಯಿ ಮಾಂಸ ಮಾರಾಟ ಮತ್ತು ಸೇವನೆ ನಿಷೇಧಿಸಿ ನಾಗಾಲ್ಯಾಂಡ್ ಸರ್ಕಾರ ಹೊರಡಿಸಿದ್ದ ಆದೇಶವನ್ನು ಗುವಾಹಟಿ ಹೈಕೋರ್ಟ್‌ನ ಕೊಹಿಮಾ ಪೀಠವು ರದ್ದುಗೊಳಿಸಿದೆ. ಈ ಬಗ್ಗೆ ಜೂನ್ 2ರಂದು ನ್ಯಾಯಮೂರ್ತಿ ಮಾರ್ಲಿ ವ್ಯಾಂಕುಂಗ್ ತೀರ್ಪು ನೀಡಿದ್ದು, ಸೂಕ್ತವಾದ ಕಾನೂನು ಆಧಾರವಿಲ್ಲದೆ ರಾಜ್ಯ ಸರ್ಕಾರವು ನಾಯಿ ಮಾಂಸ ಸೇವನೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ನಾಯಿ ಮಾಂಸ ಮಾರಾಟ ಮತ್ತು ಸೇವನೆಯನ್ನು ಸರ್ಕಾರ ನಿಷೇಧಿಸಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ಜಾರಿಗೊಳಿಸಿಲ್ಲ. ಆದ್ದರಿಂದ ಇದಕ್ಕೆ ಯಾವುದೇ ಕಾನೂನಿನ ಆಧಾರ ಇಲ್ಲ. ಹೀಗಾಗಿ 2020ರಲ್ಲಿ ಹೊರಡಿಸಿದ್ದ ನಾಯಿ ಮಾಂಸದ ಮೇಲಿನ ನಿಷೇಧವನ್ನು ರದ್ದು ಮಾಡಲಾಗುತ್ತದೆ. ಇದು ಸಂಪುಟದಲ್ಲಿ ಅನುಮೋದನೆಗೊಂಡಿದ್ದರೂ ಸಹ ರದ್ದಾಗಲಿದೆ ಎಂದು ನ್ಯಾಯಪೀಠ ಹೇಳಿದೆ.
ನಾಯಿ ಮಾಂಸವು ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸಂಯೋಜಕಗಳು) ನಿಯಮಗಳಿಗೆ ಒಳಪಟ್ಟಿಲ್ಲ ಎನ್ನುವುದನ್ನೂ ನ್ಯಾಯಾಲಯ ಗಮನಿಸಿದೆ. ನಾಯಿಗಳ ಮಾಂಸವನ್ನು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾತ್ರ ಸೇವಿಸಲಾಗುತ್ತದೆ. ಮಾಂಸ ಸೇವಿಸುವ ಕಲ್ಪನೆಯು ದೇಶದ ಇತರ ಭಾಗಗಳಲ್ಲಿ ಪರಕೀಯವಾಗಿದೆ. ನಿಯಮ 2.5.1 (ಎ)ರ ಅಡಿಯಲ್ಲಿ ಮಾನವ ಬಳಕೆಗಾಗಿ ನರಿ/ನಾಯಿಗಳನ್ನು ಪ್ರಾಣಿಯಾಗಿ ಸೇರಿಸುವುದು ಕಲ್ಪನೆಗೂ ಮೀರಿದೆ. ಏಕೆಂದರೆ ನಾಯಿ ಮಾಂಸದ ಸೇವನೆಯು ಯೋಚಿಸಲಾಗದು ಎಂದು ಪರಿಗಣಿಸಲಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.