ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಘೋಷಣೆಗಳನ್ನು ಕೂಗಿದ ಆರೋಪಿ ಸಫ್ವಾನ್ ಅವರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸದಸ್ಯನ ವಿರುದ್ಧ ಇದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಬಾಬರಿ ಮಸೀದಿ ಪ್ರಕರಣದಲ್ಲಿ ಐಪಿಸಿಯ ಸೆಕ್ಷನ್ 153 ಎ ರೊಳಗೆ ವ್ಯಕ್ತಿಯ ವಿರುದ್ಧ ಆರೋಪ ಹೊರಿಸುವ ಮೊದಲು ಪೊಲೀಸ್ ಇಲಾಖೆ ಸರಕಾರದ ಅನುಮತಿ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಪ್ರಕರಣವನ್ನು ರದ್ದುಪಡಿಸಲಾಗಿದೆ. ಆದರೆ ಹೈಕೋರ್ಟ್, ಸುಪ್ರೀಂ ತೀರ್ಪಿನ ವಿರುದ್ಧ ಘೋಷಣೆಗಳನ್ನು ಕೂಗುವುದು ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತದೆ, ಅದನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದೆ.
ಆರೋಪಿ ಸಫ್ವಾನ್ ಅವರು, ಸಿಎಫ್‌ಐ ಬ್ಯಾನರ್‌ಸಹಿತ ಇತರರೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಬಳಿ ಅಯೋಧ್ಯೆ-ಬಾಬರಿ ಮಸೀದಿ ಪ್ರಕರಣದ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದರು. ಆದರೆ ಇದು ಎರಡು ಗುಂಪುಗಳ ಹಾಗೂ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತದೆಯೇ ಹೊರತು, ಬೇರೇನೂ ಅಲ್ಲ. ಇದು ಮಂಗಳೂರು ಭಾಗದಲ್ಲಿ ಸೌಹಾರ್ದತೆಗೆ ಧಕ್ಕೆ ತರುವಂಥ ಕೃತ್ಯ. ಆರೋಪಿಗಳು ತೀರ್ಪಿನ ವಿರುದ್ಧ ವ್ಯಕ್ತಪಡಿಸಿದ ಆಕ್ರೋಶವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.