ಮುಂಬೈ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ 48 ಬಹುಮಹಡಿ ಕಟ್ಟಡಗಳನ್ನು ಕೆಡವಲು ಮುಂಬೈ ಉಪನಗರದ ಕಲೆಕ್ಟರ್‌ಗೆ ಬಾಂಬೆ ಹೈಕೋರ್ಟ್ ಇಂದು ತನ್ನ ಆದೇಶದಲ್ಲಿ ನಿರ್ದೇಶನಗಳನ್ನು ನೀಡಿದೆ.
ಬಾಂಬೆ ಹೈಕೋರ್ಟ್ ಆದೇಶದ ಪ್ರಕಾರ ನಿರ್ದಿಷ್ಟ ಎತ್ತರದಲ್ಲಿ ನಿರ್ಮಿಸಲಾದ ಭಾಗಗಳನ್ನು ಕೆಡವಬೇಕಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ಇನ್ನು ಈ ಕೆಡವುವಿಕೆಯ ಜವಾಬ್ದಾರಿಯನ್ನು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ ವರ್ಗಾಯಿಸಲು ಪ್ರಯತ್ನಿಸಿದ್ದಕ್ಕಾಗಿ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಪಿಐಎಲ್ ಸಲ್ಲಿಕೆ:ಎತ್ತರ ಉಲ್ಲಂಘನೆಗಾಗಿ ನೋಟಿಸ್ ಜಾರಿ ಮಾಡಿರುವ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸುವಂತೆಯೂ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ. ಮುಂಬೈ ವಿಮಾನ ನಿಲ್ದಾಣದ ಸಮೀಪವಿರುವ ಎತ್ತರದ ಕಟ್ಟಡಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ವಕೀಲ ಯಶವಂತ್ ಶೆಣೈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತ್ತು.
ಮುಂಬೈ ಇಂಟರ್ ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (MIAL) ನಿಂದ ನಿಯತಕಾಲಿಕ ಸಮೀಕ್ಷೆಗಳನ್ನು ಕೈಗೊಂಡಿದ್ದು, 2010 ರಲ್ಲಿ ಒಟ್ಟು 137 ಕಟ್ಟಡಗಳನ್ನು ಗುರುತಿಸಲಾಗಿದೆ. ಈ 137 ಕಟ್ಟಡಗಳ ಪೈಕಿ 63 ಪ್ರಕರಣಗಳಲ್ಲಿ ಅಂತಿಮ ಆದೇಶ ಹೊರಡಿಸಲಾಗಿದೆ. ಈ ಪೈಕಿ ಒಂಬತ್ತು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಆರು ಕಟ್ಟಡಗಳು ಈ ನಿಯಮ ಪಾಲಿಸಿವೆ. ಇನ್ನುಳಿದ 48 ಕಟ್ಟಡಗಳನ್ನು ಪಾಲನೆ ಅಥವಾ ಮೇಲ್ಮನವಿ ಸಲ್ಲಿಸದ ಕಾರಣ ತಕ್ಷಣವೇ ನೆಲಸಮಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.