ಚಂಡೀಗಢ:ಬಿಜೆಪಿ ಮುಖಂಡ ತೇಜಿಂದರ್ ಪಾಲ್ ಬಗ್ಗಾಗೆ ಪಂಜಾಬ್ ಹರಿಯಾಣ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಜುಲೈ 5ರವರೆಗೆ ಮಧ್ಯಂತರ ಆದೇಶ ಕಾಯ್ದುಕೊಳ್ಳುವಂತೆ ಕೋರ್ಟ್ ಆದೇಶಿಸಿದೆ. ಜುಲೈ 5ರವರೆಗೆ ತೇಜಿಂದರ್ ಬಗ್ಗಾ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದೆ. ಕಳೆದ ವಿಚಾರಣೆ ಸಂದರ್ಭದಲ್ಲಿ, ಹೈಕೋರ್ಟ್ ಬಗ್ಗಾ ಬಂಧನವನ್ನು ಮೇ 10 ರವರೆಗೆ ತಡೆ ಹಿಡಿದಿತ್ತು ಮತ್ತು ಈಗ ಅದೇ ಆದೇಶವನ್ನು ಜುಲೈ 5 ರವರೆಗೆ ಮುಂದುವರಿಸಲು ಆದೇಶಿಸಿದೆ.
ಮೇ 6ರಂದು ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಆಮ್ ಆದ್ಮಿ ಪಕ್ಷದ ಮುಖಂಡ, ಮೊಹಾಲಿ ನಿವಾಸಿ ಸನ್ನಿ ಅಹ್ಲುವಾಲಿಯಾ ದಾಖಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಗ್ಗಾ ವಿರುದ್ಧ ಪ್ರಚೋದನಕಾರಿ ಹೇಳಿಕೆ, ದ್ವೇಷಕ್ಕೆ ಪ್ರೇರಣೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.