ಕರ್ನಾಟಕ

karnataka

ಸ್ಕಿಲ್​ ಡೆವಲಪ್​ಮೆಂಟ್​ ಕೇಸ್​: ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಜಾಮೀನು ಮಂಜೂರು

By ETV Bharat Karnataka Team

Published : Nov 20, 2023, 3:30 PM IST

ಸ್ಕಿಲ್​ ಡೆವಲಪ್​ಮೆಂಟ್​ ಕೇಸ್​ನಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಜಾಮೀನು ಸಿಕ್ಕಿದೆ.

ನಾಯ್ಡುಗೆ ಜಾಮೀನು ಮಂಜೂರು
ನಾಯ್ಡುಗೆ ಜಾಮೀನು ಮಂಜೂರು

ಹೈದರಾಬಾದ್​:ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಸದ್ಯ ಅನಾರೋಗ್ಯದಿಂದಾಗಿ ಜೈಲಿನಿಂದ ಹೊರಬಂದು ಚಿಕಿತ್ಸೆ ಪಡೆಯುತ್ತಿರುವ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್​ ಸೋಮವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಮಲ್ಲಿಕಾರ್ಜುನ್ ರಾವ್ ಅವರು, ಬಾಬು ಅವರ ಮನವಿಯನ್ನು ಪುರಸ್ಕರಿಸಿದರು. ಅನಾರೋಗ್ಯ ನಿಮಿತ್ತ ಬಾಬು ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ಅವಧಿ ಇದೇ 28ಕ್ಕೆ ಮುಗಿಯಲಿದ್ದು, ಅವರು ಮತ್ತೆ ಜೈಲಿಗೆ ಹೋಗುವುದು ತಪ್ಪಿದೆ.

ಪ್ರಕರಣದ ವಿಚಾರಣೆ ಕುರಿತಂತೆ ಅವರು ಇದೇ 30 ರಂದು ಎಸಿಬಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಇದೇ ವೇಳೆ ಕೋರ್ಟ್​ ಹೇಳಿದೆ. ಸ್ಕಿಲ್​ ಡೆವಲಪ್​ಮೆಂಟ್​ ಕೇಸ್​ನಲ್ಲಿ ಆರೋಪಿಯಾಗಿರುವ ಚಂದ್ರಬಾಬು ಅವರನ್ನು ಸೆಪ್ಟೆಂಬರ್​ 9ರಂದು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ರಾಜಮಂಡ್ರಿ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು.

ವಕೀಲರ ವಾದವೇನು? :ಚಂದ್ರಬಾಬು ಅವರು ಕೋರಿದ್ದ ಜಾಮೀನು ಅರ್ಜಿ ಕುರಿತು ಈ ತಿಂಗಳ 15 ಮತ್ತು 16 ರಂದು ವಿಚಾರಣೆ ನಡೆಯಿತು. ಸಿಐಡಿ ಪರವಾಗಿ ಎಎಜಿ ಪೊನ್ನವೋಲು ಸುಧಾಕರ್ ರೆಡ್ಡಿ ವಾದ ಮಂಡಿಸಿದರೆ, ಚಂದ್ರಬಾಬು ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ವಾದಿಸಿದರು. ಮಾಜಿ ಸಿಎಂ ಬಾಬು ಅವರನ್ನು ಚುನಾವಣೆಗೂ ಮುನ್ನ ಬಂಧಿಸುವ ಸಂಚಿನ ಭಾಗವಾಗಿ ಈ ಕೃತ್ಯ ಜರುಗಿದೆ. ಸ್ಕಿಲ್ ಡೆವಲಪ್​ಮೆಂಟ್​ ಪ್ರಕರಣದಲ್ಲಿ ನಿಜವಾಗಿ ಏನು ನಡೆದಿದೆ ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿಲ್ಲ ಎಂದು ಸೀಮೆನ್ಸ್ ಫೋರೆನ್ಸಿಕ್ ಆಡಿಟ್‌ನಲ್ಲಿ ನಮೂದಿಸಲಾಗಿದೆ. ಫೋರೆನ್ಸಿಕ್ ವರದಿಯಲ್ಲಿ ಕ್ಷೇತ್ರ ಪರಿಶೀಲನೆ ಮಾಡಿಲ್ಲ ಎಂದು ಉಲ್ಲೇಖಿಸಲಾಗಿದೆ. ಆದಾಗ್ಯೂ ಅವರನ್ನು ಒತ್ತಡ ಹೇರಿ ಬಂಧಿಸಲಾಗಿದೆ ಎಂದು ವಾದಿಸಲಾಗಿತ್ತು. ಎರಡೂ ಕಡೆಯ ವಾದ ಆಲಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಈಗ ಸಂಪೂರ್ಣ ಜಾಮೀನು ಮಂಜೂರು ಮಾಡಿದೆ.

ಪೂರ್ಣ ಜಾಮೀನು ಪಡೆದಿರುವ ಚಂದ್ರಬಾಬು ನಾಯ್ಡು ಅವರು ಇನ್ನು ಮುಂದೆ ನಡೆಯುವ ಪಕ್ಷದ ರ‍್ಯಾಲಿ, ಸಭೆಗಳಲ್ಲಿ ಭಾಗಿಯಾಗಬಹುದಾಗಿದೆ. ಇದೇ ತಿಂಗಳ 29ರಿಂದ ಪಕ್ಷ ಹಮ್ಮಿಕೊಂಡಿರುವ ರಾಜಕೀಯ ರ‍್ಯಾಲಿ ಮತ್ತು ಸಭೆಗಳಲ್ಲಿ ಭಾಗವಹಿಸಬಹುದು ಎಂದು ಹೈಕೋರ್ಟ್ ಕೂಡ ಹೇಳಿದೆ. ನವೆಂಬರ್​ 30 ರಂದು ಚಂದ್ರಬಾಬು ಅವರು ಎಸಿಬಿ ನ್ಯಾಯಾಲಯಕ್ಕೆ ಹಾಜರಾಗಿ ತಾವು ಪಡೆದ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ವರದಿ ನೀಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ಇದನ್ನೂ ಓದಿ:ಫೈಬರ್​ ನೆಟ್​ ಹಗರಣ: ನವೆಂಬರ್ 30ರವರೆಗೆ ಚಂದ್ರಬಾಬು ನಾಯ್ಡುಗೆ ಬಂಧನದಿಂದ ರಕ್ಷಣೆ ವಿಸ್ತರಿಸಿದ ಸುಪ್ರೀಂ

ABOUT THE AUTHOR

...view details