ವಾರಾಣಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ವಾರಾಣಸಿಯ ವಿವಾದಿತ ಜ್ಞಾನವಾಪಿ ಮಸೀದಿ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಯ ವೈಜ್ಞಾನಿಕ ಸಮೀಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಆಗಸ್ಟ್ 3ರವರೆಗೆ ತಡೆಯಾಜ್ಞೆ ವಿಸ್ತರಿಸಿದೆ. ಹೀಗಾಗಿ ಪಾಟ್ನಾ, ದೆಹಲಿ, ಆಗ್ರಾ, ಲಖನೌದಿಂದ ಆಗಮಿಸಿದ್ದ ಎಎಸ್‌ಐ ತಂಡದ ಸದಸ್ಯರು ತಮ್ಮ-ತಮ್ಮ ನಗರಗಳಿಗೆ ಮರಳಿದ್ದಾರೆ.
ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಇದೆ. ಹೀಗಾಗಿ ಹಿಂದೂ ದೇವಾಲಯದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂಬ ಒತ್ತಾಯ ಇದೆ. ಈ ಸಂಬಂಧ ಹಿಂದೂ ಪರ ಸಂಘಟನೆಗಳು ಹಾಗೂ ಮಸೀದಿ ಮಂಡಳಿ ಎರಡೂ ಕಡೆಯಿಂದ ಕಾನೂನು ಹೋರಾಟ ನಡೆಯುತ್ತಿದೆ. ಜುಲೈ 21ರಂದು ವಾರಾಣಸಿಯ ಜಿಲ್ಲಾ ಸಿವಿಲ್ ಕೋರ್ಟ್ ಎಎಸ್‌ಐಯ ವೈಜ್ಞಾನಿಕ ಸಮೀಕ್ಷೆಗೆ ಆದೇಶ ನೀಡಿತ್ತು.
ಇದನ್ನೂ ಓದಿ:ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ವಾರಾಣಸಿ ಕೋರ್ಟ್ ಆದೇಶ
ಈ ಆದೇಶದಂತೆ ಜುಲೈ 24ರಂದು ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳ ತಂಡಗಳು ವೈಜ್ಞಾನಿಕ ಸಮೀಕ್ಷೆಯನ್ನು ಆರಂಭಿಸಿದ್ದವು. ಅಂದು ನಾಲ್ಕು ಗಂಟೆಗಳ ಕಾಲ ಈ ಸಮೀಕ್ಷೆ ನಡೆದಿತ್ತು. ಇದಾದ ನಂತರ ಅದೇ ದಿನ (ಜುಲೈ 24) ಸುಪ್ರೀಂಕೋರ್ಟ್ ಈ ಸಮೀಕ್ಷೆಗೆ ತಡೆ ನೀಡಿತ್ತು. ಮತ್ತೊಂದೆಡೆ, ತನ್ನ ವಿಚಾರಣೆ ಮುಂದುವರೆಸಿರುವ ಅಲಹಾಬಾದ್ ಹೈಕೋರ್ಟ್ ಈ ಸಮೀಕ್ಷೆಯ ತಡೆಯಾಜ್ಞೆಯನ್ನು ಆಗಸ್ಟ್ 3ರವರೆಗೆ ವಿಸ್ತರಿಸಿದೆ. ತನ್ನ ತೀರ್ಪನ್ನು ಹೈಕೋರ್ಟ್ ಆಗಸ್ಟ್ 3ರಂದು ನೀಡಲಿದೆ. ಇದರಿಂದಾಗಿ ವಾರಣಾಸಿಯಲ್ಲಿ ತಂಗಿದ್ದ ಎಎಸ್‌ಐ ವೈಜ್ಞಾನಿಕ ಸಮೀಕ್ಷೆಯ ತಂಡಗಳ ಸದಸ್ಯರು ತಮ್ಮ-ತಮ್ಮ ನಗರಗಳಿಗೆ ವಾಪಸ್ ಆಗಿದ್ದಾರೆ. ಆದರೆ, ತಂಡದ ಸದಸ್ಯರಿಗೆ ಆಗಸ್ಟ್ 2ರಂದು ಮತ್ತೆ ವಾರಾಣಸಿಗೆ ಮರಳಲು ಸೂಚನೆ ನೀಡಲಾಗಿದೆ.