ಶೋಪಿಯಾನ್:ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಅಡಗುತಾಣವೊಂದನ್ನು ಪತ್ತೆ ಹಚ್ಚಿರುವ ಭಾರತೀಯ ಸೇನೆ, ಉಗ್ರರ ಅಡಗುತಾಣ ಧ್ವಂಸಗೊಳಿಸಿದೆ. ಸೇನಾ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕೂಡಾ ನೀಡಿದ್ದಾರೆ.
ಕಾಶ್ಮೀರ ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆಯಲ್ಲಿ ಅಡಗುತಾಣವನ್ನು ನಾಶ ಮಾಡಲಾಗಿದೆ. ಕಳೆದ ರಾತ್ರಿ ಸೇನೆ ಶೋಪಿಯಾನ್ ಜಿಲ್ಲೆಯ ಕುತ್ಪೋರಾ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಮನೆಯೊಂದರಲ್ಲಿ ಇದ್ದ ಅಡಗುತಾಣ ಪತ್ತೆಯಾಗಿತ್ತು. ಇದನ್ನು ಸೇನೆ ಧ್ವಂಸಗೊಳಿಸಿದೆ.
ಸೇನೆ ಸೋಪಿಯಾನದಲ್ಲಿ ಅಡಗುತಾಣ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿತ್ತು. ಪೊಲೀಸರು ಮತ್ತು ಸೇನಾ ಪಡೆಗಳು ಶೋಪಿಯಾನ್‌ದಲ್ಲಿ ಉಗ್ರರು ಇರುವ ಮಾಹಿತಿ ಪಡೆದು ಈ ಕಾರ್ಯಾಚರಣೆ ಕೈಗೊಂಡಿದ್ದವು ಎಂದು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಉಗ್ರರು ಸೇನಾ ಸಿಬ್ಬಂದಿ ಮೇಲೆ ಗ್ರೆನೇಡ್ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಉಗ್ರರು ಕತ್ತಲೆಯ ಲಾಭವನ್ನು ಪಡೆದುಕೊಂಡು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಂತರ ಸೇನಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿ, ವಸತಿ ಗೃಹದಲ್ಲಿದ್ದ ಅಡಗುತಾಣವನ್ನು ನಾಶಪಡಿಸಿದರಲ್ಲದೇ ಆ ಸ್ಥಳದಲ್ಲಿದ್ದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ:ಪಂಡಿತರು ಕಾಶ್ಮೀರ ತೊರೆಯುವಂತೆ ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ ಕರೆ