ಕೊಲ್ಕತ್ತಾ:ಹಬ್ಬದ ಸಮಯದಲ್ಲಿ ಹೂವಿನ ಬೆಲೆ ದುಬಾರಿಯಾಗುವುದು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳದಲ್ಲಿ ಏರಿಕೆಯಾಗುತ್ತಿರುವ ಹೂವಿನ ದರ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮಲ್ಲಿಗೆ, ಕಮಲ, ಸೇವಂತಿಗೆ ಸೇರಿದಂತೆ ಪ್ರಮುಖ ಹೂವುಗಳ ಬೆಲೆ ಗಗನಕ್ಕೇರುತ್ತವೆ. ಆದರೆ, ಇಲ್ಲಿ ಒಂದು ಸಾವಿರ ಕೆಂಪು ದಾಸವಾಳ ಹೂವಿನ ಬೆಲೆ 1,000 ರೂಪಾಯಿ ತಲುಪಿದೆ. ಈ ಬೆಳವಣಿಗೆ ಗ್ರಾಹಕರು ಹುಬ್ಬೇರುವಂತೆ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಕಾಳಿ ಪೂಜೆ ಅದ್ಧೂರಿಯಾಗಿ ನಡೆಯುತ್ತದೆ. ಈ ಪೂಜೆಗೆ ಕೆಂಪು ದಾಸವಾಳ ಹೂವಿಲ್ಲದೇ ಸಂಪೂರ್ಣವಾಗದು. ಇದೇ ಕಾರಣಕ್ಕೆ ಕಳೆದೊಂದು ವಾರದಿಂದ ಈ ಹೂವಿಗೆ ಬಂಗಾರದ ಬೆಲೆ ಬಂದಿದೆ. ಎಂದಿಗಿಂತ ಬೆಲೆ ಐದು ಪಟ್ಟು ಹೆಚ್ಚಾಗಿದೆ.
ಹೂವು ಮಾರಾಟಗಾರರು ಮಾತನಾಡಿ, "ಈ ಬಾರಿ ಅವಧಿಪೂರ್ವವಾಗಿ ಚಳಿಗಾಲ ಆರಂಭವಾಗಿದೆ. ಇದು ಕೆಂಪು ದಾಸವಾಳ ಹೂವಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಬೆಲೆ ಏರಿಕೆಗೆ ಇದು ಕಾರಣ" ಎಂದರು. ಸಾಮಾನ್ಯವಾಗಿ ಪ್ರತಿವರ್ಷ ಕಾಳಿ ಪೂಜೆಗೂ ಮುನ್ನ ಕೆಂಪು ದಾಸವಾಳ ಹೂವಿನ ಬೆಲೆ ಏರಿಕೆಯಾಗುತ್ತದೆ. ಕಳೆದ ವಾರ 60 ರಿಂದ 40ರೂಗೆ ಮಾರಾಟವಾಗುತ್ತಿದ್ದ ದಾಸವಾಳ ಹೂವಿನ ಬೆಲೆ ಈಗ 350 ರಿಂದ 400 ರೂ.ನಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎಂದು ಅವರು ತಿಳಿಸಿದರು.