ರಾಜೌರಿ (ಜಮ್ಮು ಮತ್ತು ಕಾಶ್ಮೀರ):ಭಾರತೀಯ ಸೇನೆಯಲ್ಲಿ 5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅತಿ ಚುರುಕಿನ ಸೇನಾ ಶ್ವಾನ ಕೆಂಟ್, ಮಂಗಳವಾರ ಉಗ್ರರ ಗುಂಡಿನ ದಾಳಿಯಲ್ಲಿ ಮೃತಪಟ್ಟಿದೆ. ತನ್ನ ಹ್ಯಾಂಡ್ಲರ್(ಜೊತೆಗಿರುವ ಯೋಧ)ನನ್ನು ಗುಂಡಿನ ದಾಳಿಯಲ್ಲಿ ರಕ್ಷಿಸಲು ಹೋಗಿ ತಾನು ಪ್ರಾಣ ತ್ಯಾಗ ಮಾಡಿದೆ. ಕೆಂಟ್ ನಿಧನಕ್ಕೆ ಸೇನೆ ಸಂತಾಪ ಸೂಚಿಸಿದೆ.
ಹೆಣ್ಣು ಶ್ವಾನವಾಗಿದ್ದ ಕೆಂಟ್, ಅತಿ ಕ್ಲಿಷ್ಟಕರವಾದ ಸೇನಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿತ್ತು. ಮಂಗಳವಾರ ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಉಗ್ರರು ಅಡಗಿದ್ದ ಮಾಹಿತಿ ತಿಳಿದು ದಾಳಿ ನಡೆಸಿದ್ ಭದ್ರತಾ ಪಡೆಗಳೊಂದಿಗೆ ಬಂದಿದ್ದ ಕೆಂಟ್ ಉಗ್ರರ ಜಾಡು ಪತ್ತೆ ಹಚ್ಚುತ್ತಿತ್ತು. ಈ ವೇಳೆ ಉಗ್ರರು ನಡೆಸಿದ ದಾಳಿಯಲ್ಲಿ ಗುಂಡುಗಳು ತಾಕಿ ಸ್ಥಳದಲ್ಲೇ ಸಾವನ್ನಪ್ಪಿದೆ. ಸೇನಾ ಶ್ವಾನ ದಳದಲ್ಲಿ ಕೆಂಟ್ 5 ವರ್ಷಗಳಿಂದ ಕಾರ್ಯಾಚರಣೆಯಲ್ಲಿತ್ತು. ಉಳಿದೆಲ್ಲ ಶ್ವಾನಗಳಿಗಿಂತ ಇದು ತುಂಬಾ ಚುರುಕಾದ ಮತ್ತು ಅತಿ ವೇಗವಾದ ನಾಯಿಯಾಗಿತ್ತು. ಈವರೆಗೂ 8 ಕಾರ್ಯಾಚರಣೆಗಳಲ್ಲಿ ಇದು ಭಾಗಿಯಾಗಿ ಉಗ್ರರ ಜಾಡನ್ನು ಪತ್ತೆ ಮಾಡಿತ್ತು.
ವಿಡಿಯೋ ಹಂಚಿಕೊಂಡ ಸೇನೆ :ಕೆಂಟ್ ಶ್ವಾನ ಈ ಹಿಂದೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ವಿಡಿಯೋವನ್ನು ಸೇನೆ ಹಂಚಿಕೊಂಡಿದೆ. ಉಗ್ರರ ಜಾಡು ಪತ್ತೆಯ ಜೊತೆಗೆ ಯೋಧರನ್ನು ಎಚ್ಚರಿಸುವ ಕೆಲಸವನ್ನೂ ಶ್ವಾನ ಮಾಡುತ್ತಿತ್ತು. ಟ್ರ್ಯಾಕರ್ ನಾಯಿಯಾಗಿ ತರಬೇತಿ ಪಡೆದ ಕೆಂಟ್ ಸೇನಾ ಕಾರ್ಯಾಚರಣೆಗಳ ಅವಿಭಾಜ್ಯ ಅಂಗವಾಗಿತ್ತು.
ಅರಣ್ಯ ಪ್ರದೇಶದಲ್ಲಿ ದಟ್ಟವಾದ ಪೊದೆಗಳ ನಡುವೆಯೂ ನುಗ್ಗುತ್ತಿದ್ದ ಕೆಂಟ್, ಶೋಧ ಕಾರ್ಯಾಚರಣೆಯಲ್ಲಿ ತನ್ನ ಸಹ ಸೈನಿಕರನ್ನು ನಿರ್ಭಯವಾಗಿ ಮುನ್ನಡೆಸುತ್ತಿತ್ತು. ಎತ್ತರದ ಪ್ರದೇಶ, ಕಠಿಣ ಕಣಿವೆಗಳು ಇದ್ದರೂ ಕೆಂಟ್ ಅಲ್ಲಿಗೆ ತೆರಳಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿತ್ತು. ಯೋಧರಿಗೆ ಅಪಾಯವಿದೆ ಎಂದು ಕಂಡುಬಂದಲ್ಲಿ ಅದು ಬೊಗಳಿ ಎಚ್ಚರಿಕೆ ರವಾನಿಸುತ್ತಿತ್ತು. ತನ್ನ ತಂಡದ ಸುರಕ್ಷತೆಯನ್ನು ಖಾತ್ರಿಪಡಿಸಿಕೊಂಡ ನಂತರ, ಕೆಂಟ್ ಮುಂದಿನ ಕಾರ್ಯಾಚರಣೆಗೆ ಅಣಿಯಾಗುತ್ತಿತ್ತು.