ಮಥುರಾ (ಉತ್ತರ ಪ್ರದೇಶ):ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಥುರಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳ ಕುರಿತು ನಟಿ ಹಾಗೂ ಹಾಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಶನಿವಾರ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ಬಗ್ಗೆ ಮಥುರಾದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಕ್ಷೇತ್ರದಲ್ಲಿ ಚಲನಚಿತ್ರ ತಾರೆಯರು ಮಾತ್ರ ಪ್ರತಿನಿಧಿಸಬೇಕೆಂದಿದೆಯೇ ಎಂದು ಮರು ಪ್ರಶ್ನಿಸಿದ್ದಾರೆ. ಹಾಗಾದರೆ ನಿಮಗೆ ಸ್ಥಳೀಯ ನಾಯಕರು ಯಾರೂ ಸ್ಪರ್ಧಿಸುವುದು ಬೇಡವೇ? ನೀವು ಹೇಳಿದಂತೆ ಅವರು ಸ್ಪರ್ಧಿಸುವುದಾದರೆ ತುಂಬಾ ಒಳ್ಳೆಯದು. ಮಥುರಾದಲ್ಲಿ ಸಿನಿ ತಾರೆಯರು ಮಾತ್ರ ಬೇಕು ಅಂದಾದರೆ ನಾಳೆ ರಾಖಿ ಸಾವಂತ್ ಕೂಡ ಬರಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ಏನು ಹೇಳಬೇಕು? ಅದರ ಬಗ್ಗೆ ನನ್ನ ಅಭಿಪ್ರಾಯವೇನು? ಅದೆಲ್ಲವನ್ನು ಮೇಲಿರುವ ಶ್ರೀಕೃಷ್ಣ ಪರಮಾತ್ಮ ಮುಂದಿನ ದಿನಗಳಲ್ಲಿ ನೋಡಿಕೊಳ್ಳುತ್ತಾನೆ. ಅವನ ಇಚ್ಚೆಯೇ ನನ್ನ ಇಚ್ಚೆ ಎಂದು ಕಾರು ಹತ್ತಿ ಅಲ್ಲಿಯಿಂದ ಹೊರಟು ಹೋದರು.
ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಟಿ ಕಂಗನಾ ರಣಾವತ್ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ಹೆಚ್ಚು ಈ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ವಾರದ ಹಿಂದೆ ಕಂಗನಾ ತಮ್ಮ ಕುಟುಂಬದೊಂದಿಗೆ ವೃಂದಾವನದಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಕಂಗನಾ, ಅಭಿಮಾನಿಗಳು ಬಯಸುವುದಾದರೆ ರಾಜಕೀಯಕ್ಕೆ ಸೇರಲು ನಾನು ಖಂಡಿತವಾಗಿ ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಇದೇ ಹೇಳಿಗೆ ಇದೀಗ ಜಾಲತಾಣದಲ್ಲಿ ಹೊಸ ಆಯಾಮ ಪಡೆದುಕೊಂಡಿದೆ.
ಇನ್ನು 73 ವರ್ಷದ ಹೇಮಾ ಮಾಲಿನಿ ಅವರು 2014 ಮತ್ತು 2019 ರಲ್ಲಿ ಎರಡು ಬಾರಿ ಮಥುರಾದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಮುಂಬರುವ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಇಂಗಿತ ಇಟ್ಟುಕೊಂಡಿದ್ದಾರೆ. ಆದರೆ, ವಯಸ್ಸನ್ನು ಪರಿಗಣಿಸಿದಾಗ ಬಿಜೆಪಿ ಯಾವ ನಿಲುವು ತೆಗೆದುಕೊಳ್ಳುತ್ತೆದೆ ಎಂಬುದನ್ನು ಕಾದುನೋಡಬೇಕು.
ಸಿನಿಮಾಗಳ ವಿಚಾರಕ್ಕೆ ಬಂದ್ರೆ ಕಂಗನಾ ಅವರು ಪ್ರಸ್ತುತ ನಿರ್ದೇಶಕ ಸರ್ವೇಶ್ ಮೇವಾರ ಅವರ 'ತೇಜಸ್' ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಭಾರತೀಯ ವಾಯುಪಡೆಯ ಪೈಲಟ್ ಪಾತ್ರವನ್ನು ಮಾಡಲಿದ್ದಾರೆ. ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಇನ್ನೂ ಬಹಿರಂಗಗೊಂಡಿಲ್ಲ. ಇದಲ್ಲದೇ ದಿ. ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ: ಬೆಂಗಳೂರಿನಲ್ಲಿ ಪೂರ್ವ ಸಿದ್ಧತಾ ಸಭೆ, ರಾಹುಲ್ ಗಾಂಧಿ ಆಪ್ತ ಸಹಾಯಕರ ತಂಡ ಭಾಗಿ