ನವದೆಹಲಿ :ಶಾಲಾ-ಕಾಲೇಜ್ಗಳಲ್ಲಿ ಹಿಜಾಬ್ ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ನಿಂದ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಅನೇಕರು ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದು, ಇದೀಗ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತರೆ ಸಂಸ್ಥೆ ಅಥವಾ ಕೆಲಸ ಮಾಡುವ ಸ್ಥಳಗಳಲ್ಲಿ ಹಿಜಾಬ್ ಮೇಲೆ ಹೊಸ ನಿಷೇಧ ಹೇರುವ ಅಗತ್ಯವಿಲ್ಲ ಎಂದಿರುವ ಅವರು, ಶಾಲೆಯಲ್ಲಿ ಡ್ರೆಸ್ ಕೋಡ್ ಅನುಸರಿಸಬೇಕು ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಹೈಕೋರ್ಟ್ನ ತೀರ್ಪು ಸ್ವಾಗತ ಮಾಡಿದ್ದಾರೆ.
ಹಿಜಾಬ್ ಬ್ಯಾನ್ ಬಗ್ಗೆ ಸಂಸದೆ ಹೇಮಾ ಮಾಲಿನಿ ಮಾತು.. ಇದೇ ವಿಚಾರವಾಗಿ ಮಾತನಾಡಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಇಸ್ಲಾಂ ಧರ್ಮ ನಂಬಿಕೆಯ ಆಚರಣೆ ಮೇಲೆ ನಿಂತಿದ್ದು, ಖುರಾನ್ನಲ್ಲಿ ಹಿಜಾಬ್ ಬಗ್ಗೆ ಏಳು ಸಲ ಉಲ್ಲೇಖವಾಗಿದೆ. ಆದರೆ, ಡ್ರೆಸ್ ಕೋಡ್ ಸಂದರ್ಭದಲ್ಲಿ ಇದರ ಬಗ್ಗೆ ಯಾವುದೇ ರೀತಿಯ ಉಲ್ಲೇಖವಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯತೆ ಅಲ್ಲ: ಹೈಕೋರ್ಟ್
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಡಿಸಿರುವ ಕರ್ನಾಟಕ ಹೈಕೋರ್ಟ್, ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದಿದ್ದು,ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯತೆಯೂ ಅಲ್ಲ ಎಂದು ಹೇಳಿದೆ.
ಕಳೆದ ಜನವರಿ ತಿಂಗಳಿಂದಲೂ ಹಿಜಾಬ್ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಹಿಜಾಬ್ ಧರಿಸುವುದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿಕೊಂಡು ಬರುವ ಮೂಲಕ ವಿವಾದ ಮತ್ತಷ್ಟು ಕಾವು ಪಡೆದಿತ್ತು. ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಿಂದ ಆರಂಭವಾಗಿದ್ದ ಹಿಜಾಬ್ ವಿವಾದ ದೇಶಾದ್ಯಂತ ವ್ಯಾಪಿಸಿತ್ತು.
ಉಡುಪಿ ಸರ್ಕಾರಿ ಕಾಲೇಜಿನಲ್ಲಿ ತರಗತಿಗೆ ಹಿಜಾಬ್ ಧರಿಸಿ ಹಾಜರಾಗುವುದಕ್ಕೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಆರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಅಲ್ಲಿಂದ ಆರಂಭವಾಗಿದ್ದ ಈ ವಿವಾದದ ಹಿನ್ನೆಲೆಯಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಸಂಬಂಧ ಫೆ.5ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.