ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿನ ಅಧಿವೇಶನವು ಫಲಪ್ರದವಾಗಿ ನಡೆಯುವಂತೆ ಸಹಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಸದರಿಗೆ ಮನವಿ ಮಾಡಿದರು.
ಚಳಿಗಾಲದ ಅಧಿವೇಶನದ ಮೊದಲ ದಿನ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಿರಂತರ ಅಡ್ಡಿಗಳಿಂದಾಗಿ ಕಲಾಪದಲ್ಲಿ ಭಾಗವಹಿಸಲು ತಮಗೆ ಅವಕಾಶ ಸಿಗುತ್ತಿಲ್ಲ ಹೊಸ ಸಂಸದರು ಆಗಾಗ ದೂರುತ್ತಾರೆ ಎಂದು ಪ್ರಧಾನಿ ಹೇಳಿದರು.
ಮೊದಲ ಬಾರಿಗೆ ಸಂಸದರಾದವರು ಪ್ರಜಾಪ್ರಭುತ್ವದ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಗರಿಷ್ಠ ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ಸದಸ್ಯರನ್ನು ವಿನಂತಿಸಿದರು. ಇದು ರಾಜ್ಯಸಭೆಯ ಅಧ್ಯಕ್ಷರಾಗಿ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರ ಮೊದಲ ಅಧಿವೇಶನವಾಗಿದೆ ಎಂದ ಪ್ರಧಾನಿ, ಉಪರಾಷ್ಟ್ರಪತಿಯವರಿಗೆ ಶುಭಾಶಯ ಸಲ್ಲಿಸುವುದಾಗಿ ತಿಳಿಸಿದರು.