ಮುಂಗೇರ್(ಬಿಹಾರ): ರಸ್ತೆಯಲ್ಲಿ ಸಂಭವಿಸುವ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್‌ಗಳನ್ನು ಧರಿಸುವುದನ್ನ ನಾವು ಕೇಳಿದ್ದೇವೆ. ಆದರೆ, ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಕಟ್ಟಡದ ಛಾವಣಿ ಕುಸಿತದಿಂದಾಗುವ ಅಪಾಯದಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಹೆಲ್ಮೆಟ್ ಧರಿಸಿ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಿಹಾರ ರಾಜ್ಯ ರಸ್ತೆ ಸಾರಿಗೆ ನಿಗಮದ (ಬಿಎಸ್‌ಆರ್‌ಟಿಸಿ) ಮುಂಗೇರ್ ಜಿಲ್ಲಾ ಕಚೇರಿಯು ಶಿಥಿಲಾವಸ್ಥೆಯಲ್ಲಿದೆ. ಈ ಹಿಂದೆ ನೌಕರರ ತಲೆಯ ಮೇಲೆ ಛಾವಣಿಯ ಭಾಗಗಳು ಕುಸಿದು ಗಾಯಗೊಂಡಿರುವ ಘಟನೆಗಳು ನಡೆದಿವೆ.
ಹೀಗಾಗಿ, ದಿನದ 8 ಗಂಟೆ ಕಾಲ ಈ ಕಟ್ಟಡದಲ್ಲಿ ಕುಳಿತು ಕೆಲಸ ಮಾಡುವ ನೌಕರರು ಹೆಲ್ಮೆಟ್ ಧರಿಸಿಕೊಂಡೇ ಇರುತ್ತಾರೆ. ಅಷ್ಟೇ ಅಲ್ಲ, ಕಚೇರಿಗೆ ಭೇಟಿ ನೀಡುವವರು ಸಹ ಹೆಲ್ಮೆಟ್ ಹಾಕಿಕೊಂಡೇ ಒಳಬರುತ್ತಾರೆ.
1959ರಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡವನ್ನು ಒಂದು ಬಾರಿಯೂ ನವೀಕರಿಸಲಾಗಿಲ್ಲ ಅಥವಾ ದುರಸ್ಥಿ ಮಾಡಲಾಗಿಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಪತ್ರ ಬರೆದರೂ ಪ್ರಯತ್ನಗಳು ವಿಫಲವಾಗಿವೆ.