ನವದೆಹಲಿ:ಇಲ್ಲಿನ ಫಾಟಾದಿಂದ ಕೇದಾರನಾಥ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮಂಗಳವಾರ ಪತನಗೊಂಡು ಪೈಲಟ್ ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಕೇದಾರನಾಥ್ ದೇವಸ್ಥಾನದಿಂದ 2 ಕಿ.ಮೀ ದೂರದಲ್ಲಿ ಈ ದುರಂತ ನಡೆದಿದೆ. ಈ ಬಗ್ಗೆ ವಿಸ್ತೃತ ತನಿಖೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಆದೇಶಿಸಿದೆ.
ಆರ್ಯನ್ ಏವಿಯೇಷನ್ ಬೆಲ್- 407 ಹೆಲಿಕಾಪ್ಟರ್ 8 ಪ್ರಯಾಣಿಕರೊಂದಿಗೆ ಕೇದಾರನಾಥ ಧಾಮದಿಂದ ಗುಪ್ತಕಾಶಿಗೆ ಹೊರಟಿತ್ತು. ಗರುಡಚಟ್ಟಿ ಪ್ರದೇಶದಲ್ಲಿ ವಿಮಾನ ಹಾರುತ್ತಿದ್ದಾಗ ಹವಾಮಾನ ವೈಪರೀತ್ಯದಿಂದ ಕಣಿವೆಯಲ್ಲಿ ಬಿದ್ದಿದೆ. ಈ ವೇಳೆ ದೊಡ್ಡ ಸದ್ದು ಕೇಳಿಬಂದಿದೆ.
ಹೆಲಿಕಾಪ್ಟರ್ ಬಿದ್ದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಇದರಲ್ಲಿದ್ದ 8 ಮಂದಿ ಪೈಕಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಅಪಘಾತದ ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.