ಔರಂಗಾಬಾದ್/ಮುಂಬೈ : ಗುಲಾಬ್ ಚಂಡಮಾರುತದ ಕಾರಣದಿಂದ ಮಹಾರಾಷ್ಟ್ರದ ಮರಾಠವಾಡ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೆಲವೆಡೆ ಸಿಡಿಲಿನ ಆರ್ಭಟವೂ ನಡೆದಿದೆ. ಈ ಎಲ್ಲ ಮಳೆ ಸಂಬಂಧಿ ಕಾರಣಗಳಿಂದಾಗಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ.
ಈಗಲೂ ಮಳೆ ಅವಾಂತರ ಮುಂದುವರೆದಿದ್ದು, ಸುಮಾರು 560ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಎನ್ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಹೆಲಿಕಾಪ್ಟರ್ ಅನ್ನೂ ಈ ಭಾಗದಲ್ಲಿ ರಕ್ಷಣಾ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಮಾಹಿತಿ ನೀಡಿದ್ದಾರೆ.
ಬರಪೀಡಿತ ಮರಾಠವಾಡದಲ್ಲಿ ಅತಿವೃಷ್ಟಿ
ಅದಲ್ಲದೇ, ಭಾನುವಾರ ಮತ್ತು ಸೋಮವಾರ ಮರಾಠವಾಡದಲ್ಲಿ ಸುರಿದ ಧಾರಾಕಾರ ಮಳೆಗೆ 200ಕ್ಕೂ ಹೆಚ್ಚು ಜಾನುವಾರುಗಳು ಕೊಚ್ಚಿಹೋಗಿವೆ. ಹಲವಾರು ಮನೆಗಳು ಹಾನಿಗೆ ಒಳಗಾಗಿವೆ. ದೀರ್ಘಕಾಲ ಬರಪೀಡಿತವಾಗಿದ್ದ ಮರಾಠವಾಡ ಭಾಗ ಈಗ ಅತಿವೃಷ್ಟಿಯಿಂದ ತತ್ತರಿಸಿದೆ. ಇದರ ಜೊತೆಗೆ ಔರಂಗಾಬಾದ್, ಲಾತೂರ್, ಉಸ್ಮಾನಾಬಾದ್, ಪರ್ಭನಿ, ನಾಂದೇಡ್, ಬೀಡ್, ಜಲ್ನಾ ಮತ್ತು ಹಿಂಗೋಲಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ.
ಮುಂದಿನ 24 ಗಂಟೆಗಳಲ್ಲಿ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಾದ ಮರಾಠವಾಡ, ಮುಂಬೈ ಮತ್ತು ಇತರ ಕೆಲವು ಭಾಗಗಳಲ್ಲಿ 'ಅತಿ ಹೆಚ್ಚು ಮಳೆಯಾಗುವ' ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಇದರಿಂದ ಮಳೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀದರ್ನಲ್ಲೂ ಎಫೆಕ್ಟ್..!
ಮಾಂಜ್ರಾ ನದಿ ಪಾತ್ರದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಕಾರಣದಿಂದಾಗಿ ನದಿ ತುಂಬಿ ಹರಿಯುತ್ತಿದೆ. ಮಾಂಜ್ರಾ ನದಿಗೆ ಕಟ್ಟಲಾಗಿರುವ ಮಾಂಜ್ರಾ ಅಣೆಕಟ್ಟು ತುಂಬಿದ ಕಾರಣದಿಂದ ಎಲ್ಲ 18 ಗೇಟುಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದ್ದು, ಬೀಡ್ ಜಿಲ್ಲೆಯ ಕೆಲವೊಂದು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ.
ಗೋದಾವರಿ ನದಿಯ ಉಪನದಿಯಾದ ಮಾಂಜ್ರಾ ಬೀದರ್ ಜಿಲ್ಲೆಯ ಮೂಲಕವೂ ಹಾದು ಹೋಗುತ್ತದೆ. ಇದರಿಂದ ಬೀದರ್ನ ಭಾಗದ ನದಿ ನೀರಿನಲ್ಲೂ ಹೆಚ್ಚಳ ಕಂಡು ಬರುವ ಸಾಧ್ಯತೆಯಿದೆ. ಈಗ ಮಾಂಜ್ರಾದ 18 ಗೇಟ್‌ಗಳನ್ನು ಮತ್ತು ಮಜಲಗಾಂವ್ ಅಣೆಕಟ್ಟಿನ 11 ಗೇಟ್‌ಗಳನ್ನು ತೆರೆಯಲಾಗಿದ್ದು, ಇದರ ಪರಿಣಾಮವಾಗಿ ಕ್ರಮವಾಗಿ 78,397 ಕ್ಯೂಸೆಕ್ 80,534 ಕ್ಯೂಸೆಕ್ ನೀರನ್ನು ಹೊರಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.