ಚೆನ್ನೈ: ಬುರೆವಿ ಚಂಡಮಾರುತ ದಕ್ಷಿಣ ತಮಿಳುನಾಡಿನ ಪಂಬನ್ ಮತ್ತು ಕನ್ಯಾಕುಮಾರಿ ಕರಾವಳಿ ಹಾದು ಹೋಗಲು ಅಣಿಯಾಗುತ್ತಿರುವ ಹಿನ್ನೆಲೆ ಬುಧವಾರ ರಾತ್ರಿಯಿಂದ ತಮಿಳುನಾಡು ಪುದುಚೇರಿ ಮತ್ತು ಕೇರಳದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಉತ್ತರ ಶ್ರೀಲಂಕಾದಿಂದ 70-80 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತವು ಪಂಬನ್ ಕರಾವಳಿ ಸಮೀಪಕ್ಕೆ ತಲುಪಿದ್ದು, ಇಂದು ಪಶ್ಚಿಮ ನೈರುತ್ಯ ದಿಕ್ಕಿನ ಪಂಬನ್ ಕರಾವಳಿಗೆ ಅಪ್ಪಳಿಸಲಿದೆ. ಬಳಿಕ ಪಂಬನ್ ಮತ್ತು ಕನ್ಯಾಕುಮಾರಿ ಮೂಲಕ ದಕ್ಷಿಣ ತಮಿಳುನಾಡು ಕರಾವಳಿ ದಾಟಲಿದೆ ಎಂದು ಐಎಂಡಿ ಸ್ಪಷ್ಟಪಡಿಸಿದೆ.
ತಮಿಳುನಾಡಿನ ಕಾವೇರಿ ಜಲಾನಯ ಪ್ರದೇಶ ತಿರುವರೂರು ಜಿಲ್ಲೆಯ ಕೊಡವಾಸಲ್, ನಾಗಪಟ್ಟಣಂ, ವೇದರಣ್ಯಂ, ಕಾರೈಕಲ್, ತಿರುಥುರೈಪೂಂಡಿ ಮತ್ತು ರಾಮನಾಥಪುರಂನ ಮುಡುಕುಲತೂರ್ನಲ್ಲಿ ಬುಧವಾರ ರಾತ್ರಿಯಿಂದ ಇಂದು ಬೆಳಗಿನವರೆಗೂ ಗರಿಷ್ಠ 20 ಸೆಂ.ಮೀ. ಮಳೆಯಾಗಿದೆ.