ಹೈದರಾಬಾದ್: ದೆಹಲಿ, ಕೇರಳ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಇದುವರೆಗೆ ಕೇರಳದಲ್ಲಿ 33 ಮತ್ತು ಉತ್ತರಾಖಂಡದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮಗಢದಲ್ಲಿ ಸೇನೆ ಮತ್ತು ವಾಯುಪಡೆ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿವೆ.
ಕೇರಳದ ಇಡುಕ್ಕಿ, ಎರ್ನಾಕುಲಂ, ಕೊಲ್ಲಂ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ 200 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗಿದೆ. ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್‌ನಲ್ಲಿ 94.6 ಮಿಮೀ ಮಳೆಯಾಗಿದ್ದು, ದೆಹಲಿಯಲ್ಲಿ 61 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಈ ಹಿಂದೆ 1960 ರಲ್ಲಿ 93.4 ಮಿಮೀ ಮಳೆಯಾಗಿತ್ತು. ಇನ್ನು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಹ ಹೆಚ್ಚು ಮಳೆಯಾಗಿದೆ.
ಮುಂಗಾರು ನಿರೀಕ್ಷೆಗಿಂತ ಏಕೆ ಹೆಚ್ಚಾಗಿ ಸುರಿಯುತ್ತಿದೆ?
ಮುಂಗಾರು ಮಾತ್ರ ನಿರೀಕ್ಷೆಗಿಂತ ಹೆಚ್ಚಿನ ಮಳೆಗೆ ಕಾರಣವಲ್ಲ. ಮೆಟ್ರೊಲಾಜಿಕಲ್ ಇಲಾಖೆಯ ಪ್ರಕಾರ, ಅಕ್ಟೋಬರ್ ಮೊದಲ ವಾರದಲ್ಲಿ, ದೇಶದ ಮತ್ತು ಮಧ್ಯ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಎರಡು ಕಡಿಮೆ ಒತ್ತಡದ ಪ್ರದೇಶಗಳಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ, ಮಳೆಯ ಹೆಚ್ಚಳ ಕಂಡು ಬರುತ್ತದೆ.
ಹವಾಮಾನ ತಜ್ಞರ ಪ್ರಕಾರ, ಅಕ್ಟೋಬರ್‌ನಲ್ಲಿ ಮಳೆ ಸಾಮಾನ್ಯವಾಗಿ ಬರುವುದಿಲ್ಲ, ಏಕೆಂದರೆ ಈ ತಿಂಗಳಲ್ಲಿ ನೈರುತ್ಯ ಮಾನ್ಸೂನ್ ಹಿಂತಿರುಗುತ್ತದೆ ಮತ್ತು ಈಶಾನ್ಯ ಮಾನ್ಸೂನ್‌ಗೆ ದಾರಿ ಮಾಡಿಕೊಡುತ್ತದೆ. ಈ ಕಾರಣದಿಂದಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯಾಗುತ್ತದೆ. ತಮಿಳುನಾಡು ರಾಜ್ಯದಲ್ಲಿ ಸಾಮಾನ್ಯವಾಗಿ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಉತ್ತಮ ಮಳೆಯಾಗುತ್ತದೆ.
ಈ ಬಾರಿ ಮುಂಗಾರು ಮರಳುವುದು ತಡವಾಗಿತ್ತು. ಸಾಮಾನ್ಯವಾಗಿ ಮುಂಗಾರು ಸೆಪ್ಟೆಂಬರ್ 17 ರಿಂದ ಹಿಂತಿರುಗುತ್ತದೆ. ಆದರೆ, ಈ ಬಾರಿ ಅದು ಅಕ್ಟೋಬರ್ 6 ಕ್ಕೆ ವಿಸ್ತರಣೆಗೊಂಡಿದೆ. ಹಿಂತಿರುಗುವ ಸಮಯದಲ್ಲಿ ಸಹ ಗುಡುಗು ಸಹಿತ ಮಳೆಯಾಗುತ್ತದೆ. ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಒಡಿಶಾ ಭಾಗಗಳಿಂದ ಮತ್ತು ಇಡೀ ದಕ್ಷಿಣ ಪರ್ಯಾಯ ದ್ವೀಪದಿಂದ ಸೋಮವಾರದವರೆಗೆ ಮುಂಗಾರು ವಾಪಸ್ ಹೋಗಲಿಲ್ಲ. ಮುಂಗಾರು ಹಿಂತಿರುಗುವಿಕೆಯ ವಿಳಂಬದಿಂದಾಗಿ, ಒಡಿಶಾ, ಈಶಾನ್ಯ ಮತ್ತು ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುತ್ತಿದೆ.