ಥಾಣೆ/ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದ ಮುಂಬೈ ಮತ್ತು ಥಾಣೆ ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಭಿವಾಂಡಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳು ಜಲಾವೃತಗೊಂಡು ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಾಜ್ಯದಲ್ಲಿ ನದಿಗಳು ಪ್ರವಾಹದ ಮಟ್ಟವನ್ನು ತಲುಪಿವೆ. ಅಬ್ಬರಿಸುತ್ತಿರುವ ಮಳೆಯಿಂದಾಗಿ ಮರಗಳು ಧರೆಗುಳಿದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಸಂಪರ್ಕ ಕಡಿತ: ಜುನಂದೂರ್ಖಿ, ಕಂಬೆ, ತೆಂಭವ್ಲಿ, ಪಲಿವಲಿ, ಗಣೆ, ಫಿರಿಂಗ್ಪಾಡ, ಲಖಿವಿಲಿ, ಚಿಂಬಿಪದ, ಕುಹೆ, ಅಂಬರಾಯಿ, ಕುಹೆ, ಖಡ್ಕಿ, ಭೂಯಿಶೆಟ್, ಮಜಿವಾಡೆ, ಧಾಮಣೆ, ವಾನಿನಿ ಸೇರಿದಂತೆ ಅನೇಕ ಗ್ರಾಮಗಳು ಭಿವಾಂಡಿ ನಗರದೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಭಿವಾಂಡಿ ಪರೋಲ್ ರಸ್ತೆಯ ಕಂಬೆ ಗ್ರಾಮದಲ್ಲಿ ನೀರು ನಿಂತಿದೆ.
ನಿಜಾಂಪುರ, ಕನೇರಿ, ಕಮಲಾ ಹೋಟೆಲ್, ನರ್ಪೋಲಿ, ಪದ್ಮನಗರ, ತಿಂಬತ್ತಿ, ಶಿವಾಜಿ ನಗರ ತರಕಾರಿ ಮಾರುಕಟ್ಟೆ, ನಜರಾನಾ ಕಾಂಪೌಂಡ್, ನಾಡಿನಾಕದ ತಗ್ಗು ಪ್ರದೇಶಗಳಲ್ಲಿ ಜೋರು ಮಳೆಯಾಗಿ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರು, ಮನೆ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಲ್ಯಾಣ್ ರಸ್ತೆ, ಅಂಜುರಫಾಟ, ರಂಜನೋಳಿ ಬೈಪಾಸ್, ವಂಜರಪಟ್ಟಿ, ನಾರ್ಪೋಲಿ ಹಾಗೂ ಶೇಲಾರ್, ಮಂಕೋಳಿ, ವಡ್ಪೆ ಬೈಪಾಸ್ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಮಳೆ ನೀರು ರಸ್ತೆಗೆ ನುಗ್ಗಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ.
ಅಲ್ಲದೇ, ಮುಂಬೈ- ನಾಸಿಕ್ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಭಾರೀ ಟ್ರಾಫಿಕ್ನಿಂದಾಗಿ ಸುಮಾರು 10 ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಅತಿಯಾದ ಮಳೆಯಿಂದ ವಾರ್ನಾ, ಕಾಮವಾರಿ, ತಾಂಸಾ ನದಿಗಳು ಅಪಾಯದ ಮಟ್ಟ ತಲುಪಿದ್ದು, ಮಳೆ ಹೀಗೆಯೇ ಮುಂದುವರಿದರೆ ಎಚ್ಚೆತ್ತುಕೊಳ್ಳುವಂತೆ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ತಂಡಕ್ಕೆ ಸೂಚನೆ ನೀಡಲಾಗಿದ್ದು, ನಾಗರಿಕರು ಜಾಗೃತರಾಗುವಂತೆ ತಹಸೀಲ್ದಾರ್ ಅಚೀಸ್ ಪಾಟೀಲ್ ತಿಳಿಸಿದ್ದಾರೆ.