ನವದೆಹಲಿ: ದೇಶದ ಅನೇಕ ಭಾಗಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಇಂದು ಬೆಳಗ್ಗಿನಿಂದಲೇ ಮುಂಬೈ, ಹರಿಯಾಣ, ದೆಹಲಿ, ಛತ್ತೀಸ್‌ಗಢ ಸೇರಿದಂತೆ ಉತ್ತರ ಭಾರತದ ನಾನಾ ಕಡೆಗಳಲ್ಲಿ ಜೋರು ಮಳೆ ಸುರಿಯುತ್ತಿದೆ.
ಹರಿಯಾಣದ ಅಂಬಾಲಾ ನಗರದ ಕೆಲವು ಭಾಗಗಳಲ್ಲಿ ಮಳೆ ಅಬ್ಬರ ಜೋರಾಗಿತ್ತು. ಜಜ್ಜರ್‌ನ ಹಲವು ಭಾಗಗಳು ಜಲಾವೃತವಾಗಿವೆ. ಗುರುಗ್ರಾಮ್‌ನಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ನರಸಿಂಗ್ ಪುರ್ ಚೌಕ್ ಬಳಿ ದೆಹಲಿ- ಜೈಪುರ ಹೆದ್ದಾರಿ (NH 48) ಜಲಾವೃತಗೊಂಡಿತು.
ದೆಹಲಿ, ಮುಂಬೈನಲ್ಲಿ ಭಾರಿ ಮಳೆ : ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ವರುಣ ಅಪ್ಪಳಿಸಿದ್ದಾನೆ. ಮುಂಬೈಗೂ ಸಹ ಎರಡು ವಾರ ತಡವಾಗಿ ಮುಂಗಾರು ಪ್ರವೇಶಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿತ್ತು. ಆದ್ರೆ, ನೈಋತ್ಯ ಮಾನ್ಸೂನ್ ಈಗ ಸಕ್ರಿಯವಾಗಿದ್ದು, ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರ ರಾಜ್ಯಾದ್ಯಂತ ಮಳೆಯಾಗುತ್ತಿದೆ.
ಇದನ್ನೂ ಓದಿ :ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿ.. ಮಳೆಗಾಗಿ ಮೊರೆಯಿಟ್ಟ ಹನಸಿ ಗ್ರಾಮಸ್ಥರು
" ಮಹಾರಾಷ್ಟ್ರ ಮಾತ್ರವಲ್ಲದೇ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುವಿನ ಕೆಲವು ಭಾಗಗಳಿಗೂ ಮುಂಗಾರು ಆಗಮಿಸಿದೆ " ಎಂದು ಐಎಂಡಿ ಮಹಾನಿರ್ದೇಶಕ ಡಾ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಇದನ್ನೂ ಓದಿ :Karnataka Rain : ರಾಜ್ಯದಲ್ಲಿ ಮುಂಗಾರು ಚುರುಕು.. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾರ್ಭಟ
ಎಲ್ಲೋ ಅಲರ್ಟ್ ಘೋಷಣೆ : ಥಾಣೆ, ಪಾಲ್ಘರ್ ಮತ್ತು ನವಿ ಮುಂಬೈ ಸೇರಿದಂತೆ ಮುಂಬೈನ ಹಲವು ಭಾಗಗಳಲ್ಲಿ ಶನಿವಾರ ರಾತ್ರಿ ಭಾರಿ ಮಳೆ ಸುರಿಯಿತು. ಮುಂದಿನ 3-4 ಗಂಟೆಗಳಲ್ಲಿ ಸಿಂಧುದುರ್ಗ, ಪಾಲ್ಘರ್, ಮುಂಬೈ ಮತ್ತು ಥಾಣೆಯಲ್ಲಿ ಸಾಧಾರಣದಿಂದ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇನ್ನೊಂದೆಡೆ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಮುಂಬೈನ ವರ್ಲಿಯಲ್ಲಿರುವ ಕರಾವಳಿ ರಸ್ತೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ, ನೀರು ನಿಲ್ಲದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ :ಚನ್ನಗಿರಿಯಲ್ಲಿ ಭಾರಿ ಮಳೆ : ರಸ್ತೆಗಳು ಜಲಾವೃತ, ನೀರಿನಲ್ಲಿ ತೇಲಿದ ದ್ವಿಚಕ್ರ ವಾಹನಗಳು
ಸುಧಾರಿಕೊಳ್ಳುತ್ತಿರುವ ಅಸ್ಸೋಂ : ಈಶಾನ್ಯ ರಾಜ್ಯ ಅಸ್ಸೋಂ ಭಾರಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿತ್ತು. ಸದ್ಯಕ್ಕೆ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೂ 15 ಜಿಲ್ಲೆಗಳಲ್ಲಿ ಸುಮಾರು 4.01 ಲಕ್ಷ ಸಂತ್ರಸ್ತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅಸ್ಸೋಂ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ :ಶಿವಮೊಗ್ಗದಲ್ಲಿ ಭಾರಿ ಮಳೆ : ರೈಲು ನಿಲ್ದಾಣದಲ್ಲಿ ನೀರು ಸೋರಿಕೆ.. ರಸ್ತೆಗಳು ಜಲಾವೃತ