ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ಸಂಕಷ್ಟ ತಂದಿದೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ನದಿಗಳು ಮತ್ತು ಚರಂಡಿಗಳು ಉಗ್ರ ರೂಪವನ್ನು ತಾಳಿವೆ. ಪರ್ವತಗಳಲ್ಲಿ ಭೂಕುಸಿತ ಮುಂದುವರಿದಿದೆ. ಪರಿಣಾಮ ನೂರಾರು ರಸ್ತೆಗಳು ಬಂದ್ ಆಗಿವೆ. ಇದೇ ವೇಳೆ ಈ ಮಳೆ ಹಲವರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ರಾಜ್ಯದಲ್ಲಿ ಇದುವರೆಗೆ 48 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ ಇಡೀ ₹ 358 ಕೋಟಿ ನಷ್ಟವಾಗಿದೆ. ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ 10 ಮತ್ತು 11ರಂದು ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಶಿಮ್ಲಾದಲ್ಲಿ ಮನೆ ಕುಸಿದು ಮೂವರು ಸಾವು:ಭಾರಿ ಮಳೆಯಿಂದಾಗಿ ಶಿಮ್ಲಾ ಜಿಲ್ಲೆಯ ಕೋಟ್‌ಗಢ ಉಪ-ತಹಸಿಲ್‌ನ ಪನೇವಾಲಿ ಗ್ರಾಮದಲ್ಲಿ ಮನೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಪರ್ವತದ ಮೇಲೆ ಭೂಕುಸಿತದಿಂದಾಗಿ ಅದರ ಅವಶೇಷಗಳು ಮನೆಯೊಂದರ ಮೇಲೆ ಬಿದ್ದಿವೆ. ಮನೆ ಹಳೆಯದಾಗಿರುವುದರಿಂದ ಅವಶೇಷಗಳು ಬಿದ್ದ ತಕ್ಷಣ ಸಂಪೂರ್ಣ ಕುಸಿದಿದೆ. ಆ ವೇಳೆ ಮನೆಯಲ್ಲಿ 5 ಮಂದಿ ಇದ್ದರು ಎಂಬುದು ತಿಳಿದುಬಂದಿದೆ. ಈ ವೇಳೆ ಅವರಿಗೆ ಹೊರಬರಲು ಅವಕಾಶ ಸಿಗದೇ ಇಡೀ ಕುಟುಂಬವೇ ಅವಶೇಷಗಳಡಿ ಸಿಲುಕಿದೆ. ಅವಘಡದಲ್ಲಿ ಪತಿ-ಪತ್ನಿ ಹಾಗೂ ಮಗು ಸಾವನ್ನಪ್ಪಿದ್ದಾರೆ. ಉಳಿದ 2 ಜನರು ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಂಡಿಯಲ್ಲಿ ಬಹುತೇಕ ರಸ್ತೆಗಳು ಅಸ್ತವ್ಯಸ್ತ :ಇಂದು ರಾಜ್ಯಾದ್ಯಂತ ರಸ್ತೆಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿವೆ. ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಂಡಿ ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳಿಗೆ ಅಡಚಣೆಯಾಗಿದೆ. ಮಂಡಿ ಜಿಲ್ಲೆಯಲ್ಲಿ 172, ಶಿಮ್ಲಾ ಜಿಲ್ಲೆಯಲ್ಲಿ 122, ಸಿರ್ಮೌರ್‌ನಲ್ಲಿ 48, ಕುಲುವಿನಲ್ಲಿ 120, ಬಿಲಾಸ್‌ಪುರದಲ್ಲಿ 8, ಸೋಲನ್‌ನಲ್ಲಿ 82 ರಸ್ತೆಗಳನ್ನು ಮುಚ್ಚಲಾಗಿದೆ.