ಕರ್ನಾಟಕ

karnataka

ದೇಶದ ಉತ್ತರ, ಪೂರ್ವ ರಾಜ್ಯಗಳಲ್ಲಿ ವರುಣಾರ್ಭಟಕ್ಕೆ 22 ಸಾವು: 5 ದಿನ ಜೋರು ಮಳೆ ಮುನ್ಸೂಚನೆ

By

Published : Aug 21, 2022, 7:38 AM IST

Updated : Aug 21, 2022, 9:12 AM IST

ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಜಾರ್ಖಂಡ್​ ಹಾಗು ಒಡಿಶಾದಲ್ಲಿ ಮಳೆಯ ನರ್ತನ ಜೋರಾಗಿದೆ.

heavy-rain-floods-landslides-in-eastern-states
ಪೂರ್ವ ರಾಜ್ಯಗಳಲ್ಲಿ ವರುಣಾರ್ಭಟ

ನವದೆಹಲಿ:ಮೇಘ ಸ್ಫೋಟದಿಂದಾಗಿ ದೇಶದ ಉತ್ತರದ ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಈಗಾಗಲೇ 22 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಆಸ್ತಿ ಹಾನಿಯಾಗಿದೆ. ಪೂರ್ವ ಭಾಗದ ಜಾರ್ಖಂಡ್​ ಒಡಿಶಾದ ಹಲವು ಪ್ರದೇಶಗಳು ಪ್ರವಾಹದಲ್ಲಿ ಸಿಲುಕಿವೆ. ಜಮ್ಮು ಕಾಶ್ಮೀರ ಹಾಗು ರಾಜಸ್ಥಾನದಲ್ಲೂ ವರ್ಷಧಾರೆ ಅಬ್ಬರಿಸುತ್ತಿದೆ.

ರಾಜಸ್ಥಾನದಲ್ಲಿ ಬಿರು ಮಳೆ ಸುರಿದು ಇಲ್ಲಿನ ಧೋಲ್​ಪುರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ರಸ್ತೆಯ ಮೇಲೆಲ್ಲಾ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಸಂಚಕಾರ ಬಂದಿದೆ. ಹಲವು ಪ್ರದೇಶಗಳ ಮನೆಗಳಿಗೂ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

ದೇಶದ ಉತ್ತರ, ಪೂರ್ವ ರಾಜ್ಯಗಳಲ್ಲಿ ವರುಣಾರ್ಭಟ

ಜಾರ್ಖಂಡ್​ನಲ್ಲಿ ಮೂವರು ಸಾವು:ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟರು. ಉಕ್ಕಿ ಹರಿಯುತ್ತಿರುವ ನಾಲ್ಕರಿ ನದಿಗೆ ಕಾರು, ದ್ವಿಚಕ್ರ ವಾಹನ ಉರುಳಿ ಇಬ್ಬರು ಪ್ರಾಣಪಕ್ಷಿ ಹಾರಿಹೋಗಿದೆ. ರಾಜ್ಯದಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಒಡಿಶಾದಲ್ಲೂ ಸುರಿದ ಧಾರಾಕಾರ ಮಳೆಗೆ ಕಂಧಮಾಲ್‌ನಲ್ಲಿ ದರಿಂಗ್‌ಬಾಡಿ, ರೈಕಿಯಾ ಮತ್ತು ಫ್ರಿಂಗಿಯಾ ಪ್ರದೇಶಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಅಧಿಕ ಮಳೆಯಿಂದ ಪ್ರವಾಹ:ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡಪ್ರದೇಶ ನಿರ್ಮಾಣಗೊಂಡು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಾಲುಂಕಿ, ಪಿಲ್ಲಾ-ಸಾಲುಂಕಿ, ಖಗ್ದಾ, ರೌಲ್ ಮತ್ತು ದಮ್ದೇನಿ ನದಿಗಳು ಉಕ್ಕಿವೆ. ಪ್ರವಾಹಪೀಡಿತ ಪ್ರದೇಶಗಳಿಂದ ಅನೇಕ ಜನರನ್ನು ಸ್ಥಳಾಂತರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಹೊರಡುವ ಯಾತ್ರಾರ್ಥಿಗಳ ಸಂಚಾರವನ್ನು ರಾತ್ರಿ ಸಮಯದಲ್ಲಿ ನಿಲ್ಲಿಸಲಾಗಿದೆ.

ವೈಷ್ಣೋದೇವಿ ಯಾತ್ರೆ ಪುನಾರಂಭ:ಪ್ರತಿಕೂಲ ಹವಾಮಾನ ಕಾರಣ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದ ಮಾತಾ ವೈಷ್ಣೋದೇವಿ ಯಾತ್ರೆ ಇಂದಿನಿಂದ ಪುನಾರಂಭವಾಗಲಿದೆ. ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಶನಿವಾರ ಸಂಜೆಯಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆ ಸ್ವಲ್ಪ ಬಿಡುವು ನೀಡಿದ್ದು, ಪ್ರವಾಹ ಇಳಿದ ಕಾರಣ ಯಾತ್ರೆಯನ್ನು ಮರು ಆರಂಭಿಸಲಾಗಿದೆ. ಭಕ್ತರ ಸುರಕ್ಷಿತ ಯಾತ್ರೆಗಾಗಿ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯನ್ನು ನಿಯೋಜಿಸಲಾಗಿದೆ.

ಮುಂದಿನ 5 ದಿನ ಮಳೆ ಎಚ್ಚರಿಕೆ:ಹಿಮಾಚಲ ಪ್ರದೇಶ, ಉತ್ತರಾಖಂಡ ಸೇರಿದಂತೆ ಪೂರ್ವ ರಾಜ್ಯಗಳಲ್ಲಿ ಮುಂದಿನ 5 ದಿನಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ. ಮುಂದಿನ 12 ಗಂಟೆಗಳ ಕಾಲ ಆರೆಂಜ್ ಅಲರ್ಟ್ ಇರಲಿದೆ. ಆಗಸ್ಟ್ 24 ರವರೆಗೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.

ಇದನ್ನೂ ಓದಿ:₹1.5 ಕೋಟಿ ಖರ್ಚು ಮಾಡಿ ಮನೆ ನಿರ್ಮಾಣ .. ಎಕ್ಸ್​​​ಪ್ರೆಸ್​ ವೇಗೋಸ್ಕರ ಮನೆಯನ್ನೇ ಎತ್ತಿ ಪಕ್ಕಕ್ಕೆ ಇರಿಸುತ್ತಿದ್ದಾನೆ ರೈತ

Last Updated : Aug 21, 2022, 9:12 AM IST

ABOUT THE AUTHOR

...view details