ಕಡಪ, ಆಂಧ್ರಪ್ರದೇಶ :ದಕ್ಷಿಣ ಭಾರತದ ಹಲವೆಡೆ ಹಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಸಾಕಷ್ಟು ಹಾನಿ ಸೃಷ್ಟಿಸಿರುವ ಮಳೆ ಆಂಧ್ರಪ್ರದೇಶದಲ್ಲೂ ಕೂಡ ತನ್ನ ಆಟಾಟೋಪ ಮುಂದುವರೆಸಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 28 ಮಂದಿ ಸಾವನ್ನಪ್ಪಿದ್ದು, 17 ಮಂದಿ ನಾಪತ್ತೆಯಾಗಿದ್ದಾರೆ.
ಕಡಪಾ ಜಿಲ್ಲೆಯ ಕಮಲಾಪುರಂನಲ್ಲಿರುವ ಪಾಪಾಗ್ನಿ ನದಿಗೆ ಕಟ್ಟಲಾಗಿರುವ ಸೇತುವೆ ಕುಸಿದು ಬಿದ್ದಿದೆ. ಮಧ್ಯರಾತ್ರಿ ಕಮಲಾಪುರಂ ಮತ್ತು ವೆಲ್ಲೂರಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಉರುಳಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಒಂದು ಕಿಲೋಮೀಟರ್ ಉದ್ದವಿರುವ ಸೇತುವೆ 7 ಮೀಟರ್ ಕುಸಿದಿದ್ದು, ಇನ್ನೂ ಉರುಳುವ ಸಾಧ್ಯತೆ ಇದೆ.
ನೆಲ್ಲೂರು ಜಿಲ್ಲೆಯಲ್ಲಿ ಮಳೆ ಅವಾಂತರ ಸೃಷ್ಟಿಯಾಗಿದೆ. ಪೆನ್ನಾ ನದಿ ಸ್ವಲ್ಪಮಟ್ಟಿಗೆ ಆತಂಕ ಸೃಷ್ಟಿಸಿದೆ. ಪೆನ್ನಾ ನದಿಗೆ ಕಟ್ಟಲಾದ ಸೇತುವೆಗೆ ಹಾನಿಯಾಗಿದ್ದು, ಮಧ್ಯರಾತ್ರಿ 12 ಗಂಟೆಯ ವೇಳೆಗೆ ಆ ಮಾರ್ಗದಲ್ಲಿ ಸಂಚಾರ ಮಾಡುವ ವಾಹನಗಳನ್ನು ತಡೆ ಹಿಡಿಯಲಾಗಿದೆ.