ಕರ್ನಾಟಕ

karnataka

ETV Bharat / bharat

ದೇಶಾದ್ಯಂತ ಮುಂದುವರೆದ ಮಳೆಯ ಆರ್ಭಟ: ರಣಭೀಕರ ಮಳೆಗೆ ಉತ್ತರ ತತ್ತರ

ದೇಶಾದ್ಯಂತ ಭಾರಿ ಮಳೆಯಾಗುತ್ತಿದೆ. ಉತ್ತರ ಭಾರತದ ರಾಜ್ಯಗಳ ಅಲ್ಲಲ್ಲಿ ಭೂ ಕುಸಿತ, ನೆರೆ ಮುಂತಾದ ಅನಾಹುತಗಳು ನಡೆದಿವೆ. ಜನಜೀವನ ಅಸ್ತವ್ಯಸ್ತವಾಗಿದೆ.

heavy-rain-across-india-dot-heavy-rain-caused-damages-across-india
ದೇಶಾದ್ಯಂತ ಮುಂದುವರೆದ ಮಳೆಯ ಆರ್ಭಟ: ರಣ ಭೀಕರ ಮಳೆಗೆ ತತ್ತರಿಸಿದ ಜನರು

By

Published : Jul 10, 2023, 9:59 AM IST

Updated : Jul 10, 2023, 12:16 PM IST

ದೇಶಾದ್ಯಂತ ಮುಂದುವರೆದ ಮಳೆಯ ಆರ್ಭಟ: ರಣಭೀಕರ ಮಳೆಗೆ ಉತ್ತರ ತತ್ತರ

ನವದೆಹಲಿ: ದೇಶಾದ್ಯಂತ ಮುಂಗಾರು ಅಬ್ಬರಿಸುತ್ತಿದೆ. ಭಾರಿ ವರ್ಷಧಾರೆಯಿಂದಾಗಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿದೆ. ಭೂ ಕುಸಿತ, ಪ್ರವಾಹ, ಕಟ್ಟಡ ಕುಸಿತದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ, ಪಂಜಾಬ್​ ಮತ್ತು ಚಂಡೀಗಢ, ಹಿಮಾಚಲ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ.

ದೆಹಲಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇಲ್ಲಿನ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕಾಗಿದೆ. ಜಡಿಮಳೆಯಿಂದಾಗಿ ಯಮುನಾ ನದಿನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಭಾನುವಾರ ಹಳೆಯ ರೈಲ್ವೆ ಸೇತುವೆಯಲ್ಲಿ ನೀರಿನ ಮಟ್ಟ 203.63 ಮೀ. ದಾಖಲಾಗಿದೆ. 204.50 ಮೀ ಇಲ್ಲಿನ ಗರಿಷ್ಟ ಮಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹತ್ತಿಕುಂಡ್ ಬ್ಯಾರೇಜ್‌ನಿಂದ ನಿರಂತರವಾಗಿ ನೀರು ಹೊರಬಿಡಲಾಗುತ್ತಿದೆ. ಭಾನುವಾರ ಸುಮಾರು ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಬಳಿಕ ಸರ್ಕಾರ ನದಿಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಿತ್ತು.

ದೆಹಲಿಯಲ್ಲಿ ಆಟೋ ಚಾಲಕ, ಮಹಿಳೆ ಸಾವು: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಅವರು ಅಧಿಕಾರಿಗಳ​ ತುರ್ತು ಸಭೆ ಕರೆದಿದ್ದಾರೆ. ದೆಹಲಿಯ ಯುಮನಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಈ ಸಂಬಂಧ ಸಭೆ ಕರೆಯಲಾಗಿದೆ. ದೆಹಲಿಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾನುವಾರ ಭಾರಿ ಮಳೆಗೆ ಒಬ್ಬರು ಆಟೋ ಚಾಲಕ ಮತ್ತು ಮಹಿಳೆ ಮೃತಪಟ್ಟಿದ್ದಾರೆ. ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ರೋಹಿಣಿಯಲ್ಲಿ ರಸ್ತೆಯ ಮಧ್ಯ ಭಾಗದಲ್ಲೇ ದೊಡ್ಡ ಹೊಂಡ ನಿರ್ಮಾಣವಾಯಿತು.

ಚಂಡೀಗಢ, ಪಂಜಾಬ್‌ನಲ್ಲೂ ಭಾರಿ ಮಳೆ: ಚಂಡೀಗಢ ಮತ್ತು ಪಂಜಾಬ್​ನಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಭಾರಿ ಮಳೆಗೆ ಇಲ್ಲಿನ ಸುಖ್ನಾ ಸರೋವರ ತುಂಬಿ ಹರಿಯುತ್ತಿದೆ. ಭಾರಿ ಮಳೆಗೆ ಫತೇಗರ್​ ಸಾಹಿಬ್​ನಲ್ಲಿ ನೆರೆ ಉಂಟಾಗಿದ್ದು, ಇಲ್ಲಿನ ನಿವಾಸಿಗಳನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಚಂಡೀಗಢದಲ್ಲಿ ಭಾರಿ ಮಳೆ ಬಗ್ಗೆ ಪ್ರತಿಕ್ರಿಯಿಸಿರುವ ಚಂಡೀಗಢ ನಗರಸಭೆಯ ಕಮಿಷನರ್​ ಅನಿಂದಿತಾ ಮಿಶ್ರಾ, ಚಂಡೀಗಢದಲ್ಲಿ ಸುಮಾರು 300 ಮಿ.ಮೀಗಿಂತ ಅಧಿಕ ಮಳೆಯಾಗಿದೆ. ಈ ಸಂಬಂಧ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ 3 ತುರ್ತು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ ಕಾರ್ಯಾಚರಣೆಗೆ 18 ತಂಡಗಳನ್ನು ರಚಿಸಲಾಗಿದೆ. ಅನಗತ್ಯ ಪ್ರಯಾಣವನ್ನು ಕೈಗೊಳ್ಳದಂತೆ ಜನರಿಗೆ ಮನವಿ ಮಾಡಿದ್ದಾರೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಪಂಜಾಬ್‌ನ ರೋಪರ್‌ನ ಕೆಲವು ಭಾಗಗಳಲ್ಲಿ ಜೋರು ಮಳೆಯಾಗುತ್ತಿದ್ದು, ಇದರಿಂದಾಗಿ ಚಂಡೀಗಢ-ಕಿರಾತ್‌ಪುರ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಇಲ್ಲಿನ ಲೂಧಿಯಾನದ ಎಲ್ಲ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಲೂಧಿಯಾನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪಂಜಾಬ್​ ಮತ್ತು ಚಂಡೀಗಢದಲ್ಲಿ ಮಳೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಉಂಟಾಗಿರುವ ಮಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, ಕೊಚ್ಚಿ ಹೋದ ಸೇತುವೆ: ಹಿಮಾಚಲ ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂ ಕುಸಿತ ಸಂಭವಿಸಿದೆ. ಮಂಡಿ ಎಂಬಲ್ಲಿ ಭಾರಿ ಮಳೆಗೆ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಕುಲು ಜಿಲ್ಲೆಯ ಮನಿಕಾರನ್​ ಎಂಬಲ್ಲಿ ಪಾರ್ವತಿ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಸೋಲನ್ ಜಿಲ್ಲೆಯ ಚೆವಾ ಗ್ರಾಮದಲ್ಲಿ ಮೇಘಸ್ಫೋಟದಿಂದಾಗಿ ಭೂಕುಸಿತ ಉಂಟಾಗಿದೆ. ಸುಮಾರು 6 ಜನ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿನ ಮಂಡಿ ಜಿಲ್ಲೆಯ ತುನಾಗ್ ಪ್ರದೇಶದಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಪ್ರವಾಹದಲ್ಲಿ ಮರಗಳು ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಸೋಲನ್​ನಲ್ಲಿ ಭಾನುವಾರ 135 ಮಿಮೀ ಮಳೆಯಾಗಿದ್ದು, ಈ ಮೂಲಕ 1971ರಲ್ಲಿ ಸುರಿದ 105 ಮಿ.ಮೀ ದಾಖಲೆಯನ್ನು ಮುರಿದಿದೆ.

ಜಮ್ಮು ಕಾಶ್ಮೀರದಲ್ಲಿ ಮಳೆ ವರದಿ: ಜಮ್ಮು ಕಾಶ್ಮೀರದಲ್ಲೂ ಜೋರಾಗಿ ಮಳೆ ಸುರಿಯುತ್ತಿದೆ. ಉಜ್​ ನದಿಯಲ್ಲಿ ಉಂಟಾದ ಹಠಾತ್​ ಪ್ರವಾಹದಿಂದಾಗಿ ನೀರಿನಲ್ಲಿ ಸಿಲುಕಿದ್ದ ಸುಮಾರು 36 ಜನರನ್ನು ರಕ್ಷಣೆ ಮಾಡಲಾಗಿದೆ. ಕಥುವಾ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಎಸ್​ಡಿಆರ್​ಎಫ್​​ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಉಧಂಪುರದಲ್ಲಿ ಸೇತುವೆಯೊಂದು ಕೊಚ್ಚಿಹೋದ ಪರಿಣಾಮ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಮ್ಮು ಕಾಶ್ಮೀರದ ಹಲವೆಡೆ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ.

ನರ್ಮದಾ ನದಿ ಮಧ್ಯೆ ಸಿಲುಕಿರುವ ನಾಲ್ವರು: ಅಲ್ಲದೇ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲೂ ಮಳೆ ಆರ್ಭಟ ಮುಂದುವರೆದಿದೆ. ಭಾರಿ ಮಳೆಯಿಂದಾಗಿ ರಾಜಸ್ಥಾನದ ಅಜ್ಮೀರ್​ನಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಮಧ್ಯ ಪ್ರದೇಶದಲ್ಲಿ ಜಬಾಲ್ಪುರದ ಗೋಪಾಲ್​ ಪುರದಲ್ಲಿ ನರ್ಮದಾ ನದಿಯಲ್ಲಿ ಸಿಲುಕಿರುವ ನಾಲ್ವರನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಎಸ್​ಡಿಆರ್​ಎಫ್​ ತಂಡ ನಡೆಸುತ್ತಿವೆ. ಭಾರಿ ಮಳೆಯಿಂದಾಗಿ ಉತ್ತರ ಭಾರತದ ಹಲವೆಡೆ ಸುಮಾರು 19 ಜನರು ಸಾವನ್ನಪ್ಪಿರುವುದಾಗಿ ಇದುವರೆಗೆ ವರದಿಯಾಗಿದೆ.

ಇದನ್ನೂ ಓದಿ :ಭಾರಿ ಮಳೆ, ಪ್ರವಾಹ ನೀರಿನಲ್ಲೇ ಜನರ ಬದುಕಿನ ಸರ್ಕಸ್‌!- ವಿಡಿಯೋ ನೋಡಿ

Last Updated : Jul 10, 2023, 12:16 PM IST

ABOUT THE AUTHOR

...view details