ಹೈದರಾಬಾದ್, ತೆಲಂಗಾಣ: ಸೋಮವಾರ ಮತ್ತು ಮಂಗಳವಾರ ತಾಪಮಾನ ಪರಿಸ್ಥಿತಿ ತೀವ್ರವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದೆ. ಈ ಎರಡೂ ದಿನ ರಾಜ್ಯದಲ್ಲಿ ಭಾರಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ. ಮುಖ್ಯವಾಗಿ ಸೋಮವಾರ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ ಎಂದು ಆರೆಂಜ್ ಅಲರ್ಟ್ ನೀಡಿದೆ. ಈ ಸಂದರ್ಭದಲ್ಲಿ ಜನರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಐಎಂಡಿ ಸೂಚಿಸಿದೆ.
ಸೋಮವಾರ ಹೆಚ್ಚಿನ ತಾಪಮಾನದ ಸಾಧ್ಯತೆಯ ದೃಷ್ಟಿಯಿಂದ, ತಂಪಾದ ಸ್ಥಳಗಳಲ್ಲಿ ಇರುವುದು ಸೂಕ್ತ. ಬಿಸಿಲಿಗೆ ಹೋಗದಿರುವುದು ಉತ್ತಮ. ಮನೆಯಿಂದ ಹೊರಗೆ ಹೋದರೆ ತಲೆಗೆ ಬಟ್ಟೆ ಕಟ್ಟಿಕೊಳ್ಳಿ. ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುತ್ತಿರಿ. 'ನಿರ್ಜಲೀಕರಣ' ಆಗುವುದನ್ನು ತಪ್ಪಿಸುವುದು ಒಳಿತು.
ಮುಖ್ಯವಾಗಿ ಅನಾರೋಗ್ಯ ಪೀಡಿತರು ಮನೆಯಲ್ಲಿ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಹಿರಿಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನೆಯಲ್ಲಿ ತಯಾರಿಸಿದ ಮಜ್ಜಿಗೆ, ನಿಂಬೆ ರಸ, ಲಸ್ಸಿ ಮುಂತಾದ ದ್ರವಗಳನ್ನು ಸೇವಿಸಿ ಎಂದು ಸಲಹೆ ನೀಡಿದೆ.
ಮಂಗಳವಾರವೂ ಜಾಗರೂಕರಾಗಿರಿ. ಸಡಿಲವಾದ ಬಟ್ಟೆಗಳನ್ನು ಧರಿಸಿ. ಬಿಸಿಲಿನಲ್ಲಿ ಹೋದರೆ ರಕ್ಷಣೆಗಾಗಿ ಕೊಡೆ ತೆಗೆದುಕೊಂಡು ಹೋಗಿ.. ಮಂಗಳವಾರವೂ ಹೆಚ್ಚಿನ ತಾಪಮಾನದ ಸಾಧ್ಯತೆಯಿದೆ. 40-4 ಡಿಗ್ರಿ ಸೆಲ್ಸಿಯಸ್ವರೆಗೆ ಬಿಸಿಲಿನ ತಾಪಮಾನ ಇರಲಿದೆ ಎಂದು ಐಎಂಡಿ ಎಚ್ಚರಿಸಿದೆ.
ಪೀಡಿತ ಜಿಲ್ಲೆಗಳು: ಸೋಮವಾರದಂದು ಆದಿಲಾಬಾದ್, ಕುಮುರಭೀಮ್ ಆಸಿಫಾಬಾದ್, ಮಂಚಿರ್ಯಾಲ, ನಿರ್ಮಲ್, ಜಗಿತ್ಯಾಲ, ಕರೀಂನಗರ, ಪೆದ್ದಪಲ್ಲಿ, ಜಯಶಂಕರ್ ಭೂಪಾಲಪಲ್ಲಿ, ಮುಲುಗು, ಭದ್ರಾದ್ರಿ ಕೊತಗುಡೆಂ, ಖಮ್ಮಂ, ನಲ್ಗೊಂಡ, ಸೂರ್ಯಪೇಟ್, ಮಹಬೂಬಾಬಾದ್, ವಾರಂಗಲ್, ಹನುಮಕೊಂಡ ಜಿಲ್ಲೆಯಲ್ಲಿ ಸೋಮಾವಾರ ಸುಮಾರು 41-44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ ಎಂದು ಐಎಂಡಿ ತಿಳಿಸಿದೆ.
ಅದರಂತೆ ಮಂಗಳವಾರದಂದು ಆದಿಲಾಬಾದ್, ಕುಮುರಭೀಮ್ ಆಸಿಫಾಬಾದ್, ಮಂಚಿರ್ಯಾಲ, ನಿರ್ಮಲ್, ನಿಜಾಮಾಬಾದ್, ಭದ್ರಾದ್ರಿ ಕೊತಗುಡೆಂ, ಖಮ್ಮಂ, ನಲ್ಗೊಂಡ, ಸೂರ್ಯಪೇಟ್ ಜಿಲ್ಲೆಗಳಲ್ಲಿ ತಾಪಮಾನ 40-43 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತೆ ಎಂದು ತಿಳಿಸಿದೆ.
16 ಜಿಲ್ಲೆಗಳಲ್ಲಿ ಬಿಸಿಗಾಳಿ!: ಇನ್ನು ರಾಜ್ಯದ 16 ಜಿಲ್ಲೆಗಳ 39 ತಾಲೂಕುಗಳಲ್ಲಿ ಭಾನುವಾರ ಬಿಸಿಗಾಳಿ ಬೀಸಿದೆ. ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ 4.5 ಡಿಗ್ರಿಗಿಂತ ಹೆಚ್ಚಿದ್ದರೆ ಅದು ಬಿಸಿಗಾಳಿ ಮತ್ತು 6.5 ಡಿಗ್ರಿಗಿಂತ ಹೆಚ್ಚಿದ್ದರೆ ಅದನ್ನು ತೀವ್ರ ಬಿಸಿಗಾಳಿ ಪ್ರದೇಶ ಎಂದು ಘೋಷಿಸಲಾಗುತ್ತದೆ. ಅಂತಹ ಸ್ಥಳದಲ್ಲಿ ಜನರ ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂದು ಐಎಂಡಿ ತಿಳಿಸಿದೆ.
ಓದಿ:Heat Wave: ಯುಪಿಯಲ್ಲಿ ಬಿಸಿಲಿನ ಹೊಡೆತ: ಹೀಟ್ವೇವ್ನಿಂದ 54 ಜನ ಸಾವು
ಬಿಸಿಗಾಳಿಗೆ 54 ಜನ ಸಾವು:ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ಸಾವನ್ನಪ್ಪಿದವರ ಸಂಖ್ಯೆ 54 ಕ್ಕೆ ಏರಿದೆ. ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಸರ್ಕಾರ ಇಬ್ಬರು ಹಿರಿಯ ವೈದ್ಯರನ್ನು ಭಾನುವಾರ ಅಲ್ಲಿಗೆ ಕಳುಹಿಸಿದೆ ಎಂದು ಆರೋಗ್ಯ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ. 'ಬೇಜವಾಬ್ದಾರಿ ಹೇಳಿಕೆ' ನೀಡಿದ ಕಾರಣಕ್ಕಾಗಿ ಬಲಿಯಾ ಮುಖ್ಯ ವೈದ್ಯಕೀಯ ಅಧೀಕ್ಷಕರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಸಚಿವರು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.