ನವದೆಹಲಿ: ದೇಶದಲ್ಲಿ ಸೂರ್ಯ ಧಗಧಗನೇ ಉರಿಯುತ್ತಿದ್ದಾನೆ. ಬೆಳಗ್ಗೆ 8 ಗಂಟೆಗೆ ಸೂರ್ಯ ಪ್ರತಾಪ ಶುರುವಾಗುತ್ತಿದೆ. ಜನ ಹೊರಗೆ ಹೆಜ್ಜೆ ಇಡಲು ಭಯ ಪಡುತ್ತಿದ್ದಾರೆ. ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪಶ್ಚಿಮ ದಿಕ್ಕಿನ ಪಾಕಿಸ್ತಾನದಿಂದ ಬರುವ ಮಾರುತಗಳು ಒಡಿಶಾದ ಮೇಲೆ ಹಾದು ಹೋಗುತ್ತಿವೆ. ಇದರ ಪರಿಣಾಮವಾಗಿ ಭಾರತದಾದ್ಯಂತ ಬಿಸಿಲಿನ ತಾಪ ಹೆಚ್ಚಾಗ್ತಿದೆ. ಈಗಾಗಲೇ ಪಶ್ಚಿಮ, ವಾಯುವ್ಯ ಮತ್ತು ಮಧ್ಯ ಭಾರತದ 14 ರಾಜ್ಯಗಳಲ್ಲಿ 44 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಕಂಡು ಬಂದಿದೆ.
ಓದಿ:ಬಿಸಿಲೋ ಬಿಸಿಲು..! ಮೃಗಾಲಯದ ಪ್ರಾಣಿಗಳಿಗೆ ನೀರಿನ ಸಿಂಚನ, ಕಲ್ಲಂಗಡಿ, ಐಸ್‌ಕ್ರೀಂ
ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಸೇರಿದಂತೆ ಸುಮಾರು 36 ಕಡೆಗಳಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಅಂಕಿ- ಅಂಶಗಳು ತೋರಿಸ್ತಿವೆ.
ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 14 ರಾಜ್ಯಗಳಲ್ಲಿ ಬಿಸಿಲಿನ ಅಲೆಯ ತೀವ್ರತೆ ವ್ಯಾಪಿಸಿದೆ. ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಕನಿಷ್ಠ ಮೇ 1 ರವರೆಗೆ ಮತ್ತು ಪೂರ್ವ ಭಾರತದಲ್ಲಿ ಮುಂದಿನ ಮೂರು ದಿನಗಳವರೆಗೆ ಸೂರ್ಯನ ಪ್ರತಾಪ ಜೊತೆ ಬಿಸಿ ಗಾಳಿ ಬೀಸಲಿದೆ ಎಂದು ಐಎಂಡಿ ತಿಳಿಸಿದೆ.
ಓದಿ:ಇದೆಂಥಾ ಬಿಸಿಲು.. ತೆಲಂಗಾಣದಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಜನ ತತ್ತರ; ದೇಶದಲ್ಲೇ ಇದು ಗರಿಷ್ಠ!!
ಬಿಸಿಲಿನ ತಾಪದ ಬಳಿಕ ಮೇ 2-4 ರ ಅವಧಿಯಲ್ಲಿ ವಾಯುವ್ಯ ಹಿಮಾಲಯದ ಪ್ರದೇಶದಲ್ಲಿ ಲಘು ಅಥವಾ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮೇ 3-4 ರ ಅವಧಿಯಲ್ಲಿ ವಾಯುವ್ಯ ಭಾರತದ ಬಯಲು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಧೂಳಿನ ಚಂಡಮಾರುತದ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.