ನವದೆಹಲಿ: ನೆರೆಯ ತೆಲಂಗಾಣದಲ್ಲಿ ತಾಪಮಾನ ಹೆಚ್ಚಾಗುತ್ತಲೇ ಇದ್ದು, ಬಿಸಿಲು ಹಾಗೂ ಬಿಸಿ ಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ. ನಲ್ಗೊಂಡದಲ್ಲಿ ಗರಿಷ್ಠ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚಾಗಿದೆ.
ದೇಶದ ಕೆಲವು ಭಾಗಗಳಲ್ಲಿ ತೀವ್ರ ಬಿಸಿ ಗಾಳಿ ಐದನೇ ದಿನವೂ ಮುಂದುವರೆದಿದೆ, ಮುಂದಿನ 48 ಗಂಟೆಗಳ ಕಾಲ ಇದೇ ವಾತಾವರಣ ಮುಂದುವರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಪಶ್ಚಿಮ ರಾಜಸ್ಥಾನದ ಹೆಚ್ಚಿನ ಭಾಗಗಳು, ಹಿಮಾಚಲ ಪ್ರದೇಶದ ಮತ್ತು ಜಮ್ಮುವಿನ ಹಲವು ಭಾಗಗಳಲ್ಲಿ ಹೆಚ್ಚಿನ ಬಿಸಿಯ ಸ್ಥಿತಿ ಕಂಡುಬಂದರೆ, ಸೌರಾಷ್ಟ್ರ-ಕಚ್, ವಿದರ್ಭ ಮತ್ತು ಗುಜರಾತ್‌ನ ಕೆಲ ಪ್ರದೇಶಗಳಲ್ಲಿ ಇದೇ ಸ್ಥಿತಿ ಇದೆ.
ಜಮ್ಮು ಮತ್ತು ಕಾಶ್ಮೀರ, ಲಡಾಖ್-ಗಿಲ್ಗಿಟ್, ಬಾಲ್ಟಿಸ್ತಾನ್-ಮುಜಫರಾಬಾದ್, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನದ ಹೆಚ್ಚಿನ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ (5.1-ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು) ಜಾಸ್ತಿ ಇದೆ. ಹರಿಯಾಣ, ಚಂಡೀಗಢ, ದೆಹಲಿ, ಅರುಣಾಚಲ ಪ್ರದೇಶ, ಅಸ್ಸೋಂ ಹಾಗೂ ಮೇಘಾಲಯದ ಕೆಲ ಸ್ಥಳಗಳಲ್ಲಿ ಇಂತಹದ್ದೇ ಬಿಸಿಯ ವಾತಾವರಣವಿದೆ.
ಗುಜರಾತ್ ಮತ್ತು ಮಹಾರಾಷ್ಟ್ರದ ಮರಾಠವಾಡದ ಹೆಚ್ಚಿನ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ (3.1 ರಿಂದ 5-ಡಿಗ್ರಿ ಸೆಲ್ಸಿಯಸ್) ಹೆಚ್ಚಾಗಿದ್ದರೆ, ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉತ್ತರಾಖಂಡ್, ಪೂರ್ವ ಮಧ್ಯಪ್ರದೇಶ, ಮಹಾರಾಷ್ಟ್ರದ, ತೆಲಂಗಾಣ ಅನೇಕ ಸ್ಥಳಗಳಲ್ಲಿ ಇದೇ ಪರಿಸ್ಥಿತಿ ಇರುವುದಾಗಿ ಹವಾಮಾನ ಇಲಾಖೆ ವಿವರಿಸಿದೆ.
ಮುಂದಿನ 48 ಗಂಟೆಗಳಲ್ಲಿ ವಾಯುವ್ಯ, ಮಧ್ಯ, ಪಶ್ಚಿಮ ಮತ್ತು ದಕ್ಷಿಣ ಪೆನಿನ್ಸುಲರ್, ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ. ಆದರೆ ನಂತರ 2-3 ಡಿಗ್ರಿ ಸೆಲ್ಸಿಯಸ್ ಕುಸಿಯುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ರಾಜ್ಯವಾರು ಹವಾಮಾನ ಮುನ್ಸೂಚನೆ: ಮುಂದಿನ ದಿನಗಳಲ್ಲಿ ಮತ್ತಷ್ಟು ತಾಪಮಾನ ಹೆಚ್ಚಳ ಸಾಧ್ಯತೆ