ಹೈದರಾಬಾದ್ (ತೆಲಂಗಾಣ) :'ನನಗೆ ಕ್ಯಾನ್ಸರ್ ಬಂದಿದೆ. ಕೊನೆಯ ಹಂತದಲ್ಲಿದ್ದೇನೆ. ಹೆಚ್ಚು ಕಾಲ ಬದುಕುವುದಿಲ್ಲ. ದಯವಿಟ್ಟು ಈ ವಿಷಯವನ್ನು ನನ್ನ ಪೋಷಕರಿಗೆ ಹೇಳಬೇಡಿ. ಅವರಿಗೆ ಸಹಿಸಲಾಗುವುದಿಲ್ಲ' ಎಂದು ಆರು ವರ್ಷದ ಬಾಲಕನೊಬ್ಬ ವೈದ್ಯರಿಗೆ ಹೇಳಿದ ಮಾತುಗಳಿವು. ಕ್ಯಾನ್ಸರ್ ಬಂದರೆ ದೊಡ್ಡವರೂ ಸಹ ಭಯಪಡುತ್ತಾರೆ. ಎಳೆ ವಯಸ್ಸಿನ ಹೃದಯ ಇಂಥದ್ದನ್ನು ಸಹಿಸಬಹುದೇ? ಆದರೆ, ಈ ಬಾಲಕ ಹೆದರಲಿಲ್ಲ. ಧೈರ್ಯದಿಂದ ಹೋರಾಡಲು ಬಯಸಿದ್ದ. ತನ್ನ ಮೇಲೆ ಭರವಸೆ ಇಟ್ಟಿದ್ದ ಪೋಷಕರು ನೊಂದುಕೊಳ್ಳುವರೆಂದು ವೈದ್ಯರಿಗೆ ಈ ವಿಷಯ ತಿಳಿಸಬೇಡಿ ಎಂದು ಬೇಡಿಕೊಂಡಿದ್ದಾನೆ. ಹೈದರಾಬಾದ್‌ನ ಖ್ಯಾತ ನರರೋಗ ತಜ್ಞ ಡಾ.ಸುಧೀರ್ ಕುಮಾರ್ ಪುಟ್ಟ ಬಾಲಕನ ಕಥೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
'ಒಂದು ದಿನ ನಾನು ರೋಗಿಗಳನ್ನು ನೋಡುತ್ತಿದ್ದಾಗ ಯುವ ಜೋಡಿ ನನ್ನ ಬಳಿಗೆ ಬಂದರು. ಅವರು ತಮ್ಮ 6 ವರ್ಷದ ಮಗನನ್ನು ಹೊರಗಡೆ ಕುಳ್ಳಿರಿಸಿ ನನ್ನ ಹತ್ರ ಬಂದು ನನ್ನ ಮಗನಿಗೆ ಕ್ಯಾನ್ಸರ್ ಇದೆ. ಆದ್ರೆ ಆ ವಿಷಯ ಮಗುವಿಗೆ ಹೇಳಬೇಡಿ ಎಂದು ಮನವಿ ಮಾಡಿದರು. ಅವನ ಆರೋಗ್ಯದ ಬಗ್ಗೆ ಗಮನಿಸಿ. ಚಿಕಿತ್ಸೆಯ ಬಗ್ಗೆ ಸಲಹೆಗಳನ್ನು ನೀಡಿ. ಆದರೆ ಕಾಯಿಲೆ ಬಗ್ಗೆ ಹೇಳಬೇಡಿ ಎಂದು ವಿನಂತಿಸಿದರು. ನಾನು ಸರಿ ಅಂದೆ. ಆ ನಂತರ ಮನುವನ್ನು ಗಾಲಿಕುರ್ಚಿಯಲ್ಲಿ ನನ್ನಲ್ಲಿಗೆ ಕರೆತರಲಾಯಿತು. ಅವನ ತುಟಿಗಳಲ್ಲಿ ನಗು. ಮಗು ತುಂಬಾ ಆತ್ಮವಿಶ್ವಾಸ ಮತ್ತು ಬುದ್ಧಿವಂತರಂತೆ ತೋರುತ್ತಿದ್ದ. ಆತನ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ಬಳಿಕ ಮಗುವಿಗೆ ನಾಲ್ಕನೇ ಹಂತದ ಬ್ರೈನ್ ಕ್ಯಾನ್ಸರ್ ತಗುಲಿರುವುದು ಗೊತ್ತಾಯಿತು. ಇದರಿಂದ ಬಲಗೈ ಮತ್ತು ಕಾಲು ನಿಷ್ಕ್ರಿಯಗೊಂಡಿತ್ತು. ಸ್ವಲ್ಪ ಸಮಯದವರೆಗೆ ಚಿಕಿತ್ಸೆಯ ಬಗ್ಗೆ ಚರ್ಚಿಸಿ, ಆತ ತನ್ನ ಪೋಷಕರನ್ನು ಹೊರಹೋಗುವಂತೆ ಹೇಳಿದ್ದಾನೆ.'