ಇಡುಕ್ಕಿ, ಕೇರಳ:ಸಾಮಾಜಿಕ ಜಾಲತಾಣಗಳಿಂದ ಏನಾದರೂ ಆಗಬಹುದು. ಒಳಿತು, ಕೆಡಕುಗಳು ನಾವು ಯಾವ ರೀತಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುತ್ತೇವೋ, ಅದನ್ನೇ ಅವಲಂಬಿಸಿರುತ್ತದೆ. ಇಲ್ಲಿ ಇನ್ಸ್ಟಾಗ್ರಾಂನ ಒಂದೇ ಒಂದು ಕಮೆಂಟ್ 21 ವರ್ಷ ವಯಸ್ಸಿನ ಹೃದಯ ಸಂಬಂಧಿ ಸಮಸ್ಯೆಯಿರುವ ಯುವತಿಯೊಬ್ಬಳು ಆಸೆಯನ್ನು ಪೂರೈಸಿದೆ.
ಆಕೆಯ ಹೆಸರು, ಧನ್ಯಾ ಸೋಜನ್.. ಅತ್ಯಂತ ಅಪರೂಪವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗಿರುವುದು ಕಂಜೆಸ್ಟಿವ್ ಹಾರ್ಟ್ ಫೇಲ್ಯೂರ್ (Congestive Heart Failure).. ಈ ಸಮಸ್ಯೆ ಇರುವ ರೋಗಿಗಳಲ್ಲಿ ಹೃದಯ ಸರಿಯಾಗಿ ಕೆಲಸ ಮಾಡುವುದಿಲ್ಲ. ಅಂದರೆ, ಕೆಲವೊಂದು ಭಾಗಗಳಿಗೆ ರಕ್ತ ಪಂಪ್ ಮಾಡಲು ಹೃದಯಕ್ಕೆ ಸಾಧ್ಯವಾಗುವುದಿಲ್ಲ.
ನಟಿ ಕರೀನಾ ಕಪೂರ್ ಹಂಚಿಕೊಂಡ ವಿಡಿಯೋ ಜಾಹೀರಾತಿಗೆ ಕಮೆಂಟ್ ಮಾಡಿದ್ದ ಧನ್ಯಾ
ಇಂತಹ ಅಪರೂಪದ ಮತ್ತು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ಧನ್ಯಾ ಸೋಜನ್, ಒಂದು ಬಾರಿ ಪ್ರಖ್ಯಾತ ಚಿನ್ನದ ಮಾರಾಟದ ಕಂಪನಿಯೊಂದರ ಜಾಹೀರಾತನ್ನು ಇನ್ಸ್ಟಾಗ್ರಾಂನಲ್ಲಿ ವೀಕ್ಷಿಸಿದ್ದರು. ಆ ಜಾಹೀರಾತಿನ ಆಭರಣಗಳನ್ನು ನೋಡಿ, ನಾನೂ ಆ ಆಭರಣಗಳನ್ನು ಧರಿಸಿ, ತುಂಬಾ ಫೋಟೋಗಳನ್ನು ತೆಗೆಸಿಕೊಳ್ಳಬೇಕು. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನನಗೆ ಆ ಆಭರಣಗಳನ್ನು ಧರಿಸಲು ಮತ್ತು ಜಾಹೀರಾತಿಗೆ ಅವಕಾಶ ನೀಡುವಿರಾ ಎಂದು ಕಮೆಂಟ್ ಮಾಡಿದ್ದಳು..
ನನಸಾಯ್ತು ಕನಸು..!
ಸಾಮಾನ್ಯವಾಗಿ ಎಲ್ಲ ಕಮೆಂಟ್ ಮಾಡುವಂತೆ, ಧನ್ಯಾ ಈ ಜಾಹೀರಾತಿಗೆ ಕಮೆಂಟ್ ಮಾಡಿದ್ದಳು. ಕೆಲವೇ ದಿನಗಳಲ್ಲಿ ಆಕೆಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಬ್ಯುಸಿನೆಸ್ ಟೀಂನಿಂದ ಕರೆಬಂದಿತ್ತು. ಮುಂದಿನ ವಾರ ಕೊಚ್ಚಿಯಲ್ಲಿ ನಡೆಯುತ್ತಿರುವ ಜಾಹೀರಾತು ಶೂಟಿಂಗ್ನಲ್ಲಿ ಪಾಲ್ಗೊಳ್ಳುವಂತೆ ಕೇಳಿದ್ದರು. ಜಾಹೀರಾತು ನಿರ್ದೇಶಕ ರೋಹನ್ ಮ್ಯಾಥ್ಯೂ ಆಕೆಯ ಕಥೆಯನ್ನು ಚಿತ್ರಿಸಿದ್ದು, ಆಕೆ ತಾನು ಇಷ್ಟ ಪಟ್ಟ ಆಭರಣದೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಕೂಡಾ ಇನ್ಸ್ಟಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಧನ್ಯಾಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.