ಪಾಟ್ನಾ: ಬಿಹಾರ ಸರ್ಕಾರ ರಾಜ್ಯದಲ್ಲಿ ನಡೆಸುತ್ತಿರುವ ಜಾತಿ ಲೆಕ್ಕಾಚಾರ ಮತ್ತು ಆರ್ಥಿಕ ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಪಾಟ್ನಾ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದೆ. ಮೇ 2 ರಂದು ಎರಡೂ ಕಡೆಯವರು ಈ ವಿಷಯವಾಗಿ ನ್ಯಾಯಾಲಯದ ಮುಂದೆ ತಮ್ಮ ವಾದ ಪ್ರತಿವಾದ ಮಂಡಿಸಿದರು. ಅಖಿಲೇಶ್ ಕುಮಾರ್ ಮತ್ತು ಇತರರ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಕೆ ವಿ ಚಂದ್ರನ್ ಅವರ ವಿಭಾಗೀಯ ಪೀಠ ನಡೆಸುತ್ತಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಇದೀಗ ಗುರುವಾರ ಹೈಕೋರ್ಟ್ ಈ ಕುರಿತು ಮಧ್ಯಂತರ ಆದೇಶ ನೀಡಲಿದೆ.
ಇಂದು ವಿಚಾರಣೆಯ ಸಂದರ್ಭದಲ್ಲಿ ಜಾತಿಗಳ ಆಧಾರದ ಮೇಲೆ ಜನಗಣತಿ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವುದು ಕಾನೂನು ಬಾಧ್ಯತೆಯೇ? ಎಂಬುದನ್ನು ನ್ಯಾಯಾಲಯವು ತಿಳಿದುಕೊಳ್ಳಲು ಬಯಸಿತು. ಈ ಹಕ್ಕು ರಾಜ್ಯ ಸರ್ಕಾರದ ಅಧೀನದಲ್ಲಿದೆಯೇ ಅಥವಾ ಇಲ್ಲವೇ ಎಂದು ಸಹ ನ್ಯಾಯಾಲಯ ಕೇಳಿದೆ. ಇದು ಗೌಪ್ಯತೆಯನ್ನು ಉಲ್ಲಂಘಿಸುತ್ತದೆಯೇ? ಎಂದು ಸಹ ತಿಳಿಯಬೇಕು ಎಂದು ಪೀಠ ಹೇಳಿದೆ.
ಸಮೀಕ್ಷೆಗೆ ರಾಜ್ಯ ಸರ್ಕಾರದಿಂದ ಐನೂರು ಕೋಟಿ ರೂ. ವೆಚ್ಚ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ದಿನುಕುಮಾರ್, ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಮತ್ತು ಆರ್ಥಿಕ ಸಮೀಕ್ಷೆ ರಾಜ್ಯ ಸರ್ಕಾರದ ವ್ಯಾಪ್ತಿಯನ್ನು ಮೀರಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನಿಬಂಧನೆಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಮಾತ್ರ ಇಂತಹ ಸಮೀಕ್ಷೆಯನ್ನು ನಡೆಸಬಹುದು ಎಂದು ಅವರು ಹೇಳಿದರು. ಇದು ಕೇಂದ್ರ ಸರ್ಕಾರದ ಅಧಿಕಾರದ ಅಡಿಯಲ್ಲಿ ಬರುತ್ತದೆ. ಈ ಸಮೀಕ್ಷೆಗೆ ರಾಜ್ಯ ಸರ್ಕಾರ 500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.