ನವದೆಹಲಿ:ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಒಟ್ಟುಗೂಡಿಸಿರುವ ಸುಪ್ರೀಂಕೋರ್ಟ್ ಇಂದು ಆ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾದನಿಕ ಪೀಠ ಇದರ ವಿಚಾರಣೆ ನಡೆಸುತ್ತಿದೆ. ಸಲಿಂಗ ವಿವಾಹ ಭಾರತದ ಸಾಂಸ್ಕೃತಿಕ ಪರಂಪರೆಗೆ ವಿರುದ್ಧವಾದುದು. ವಿವಾಹ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿರುವ ಈ ಸಂಬಂಧಕ್ಕೆ ಕಾನೂನು ಮಾನ್ಯತೆ ನೀಡುವುದು ತರವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ನಿನ್ನೆಯಷ್ಟೇ ತಕರಾರು ಸಲ್ಲಿಸಿತ್ತು.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು. ಅವರ ಭಾವನೆಗಳಿಗೂ ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂನ ಏಕಸದಸ್ಯ ಪೀಠ, ಸಲಿಂಗ ಸಂಬಂಧದಲ್ಲಿ ಒಟ್ಟಿಗೆ ವಾಸಿಸುವ ವ್ಯಕ್ತಿಗಳನ್ನು ಭಾರತೀಯ ಕುಟುಂಬದ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿತ್ತು. ಕುಟುಂಬ ವ್ಯವಸ್ಥೆ ಎಂಬುದು ಪತಿ, ಪತ್ನಿ ಮತ್ತು ಜನಿಸಿದ ಮಕ್ಕಳ ಒಕ್ಕೂಟವಾಗಿದೆ. ಹೀಗಾಗಿ ಸಲಿಂಗ ವಿವಾಹವನ್ನು ಪ್ರತಿಪಾದಿಸುವ ಅರ್ಜಿಗಳನ್ನು ಸಾಂವಿಧಾನಿಕ ಪೀಠದ ಮುಂದೆ ವಿಸ್ತೃತ ಚರ್ಚೆ ನಡೆಸುವುದು ಉತ್ತಮ ಎಂದು ಹೇಳಿ ಪ್ರಕರಣವನ್ನು ವರ್ಗಾಯಿಸಿತ್ತು.
ಸಲಿಂಗ ವಿವಾಹಕ್ಕೆ ಕೇಂದ್ರ ತೀವ್ರ ವಿರೋಧ:ಮದುವೆ ಎಂಬುದು ವಿಶೇಷವಾದ ಒಕ್ಕೂಟವಾಗಿದೆ. ಅದರಲ್ಲಿ ಹೆಣ್ಣು- ಗಂಡು ಅವರಿಗೆ ಜನಿಸಿದ ಮಕ್ಕಳು ಇರುತ್ತಾರೆ. ಇಂತಹ ಸಂಬಂಧಕ್ಕೆ ಸಮಾಜದಲ್ಲಿ ವಿಶೇಷವಾದ ಪ್ರಾಧಾನ್ಯತೆ ಇದೆ. ಅದರ ಹೊರತಾದ ಯಾವುದೇ ಸಂಬಂಧಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಒಳಿತಲ್ಲ ಎಂದು ಹೇಳಿದ ಕೇಂದ್ರ ಸರ್ಕಾರ ಸಲಿಂಗ ವಿವಾಹಕ್ಕೆ ಕಾನೂನು ಅನುಮತಿ ನೀಡುವುದನ್ನು ತೀವ್ರವಾಗಿ ವಿರೋಧಿಸಿದೆ.
ಸಲಿಂಗ ವಿವಾಹವನ್ನು ಅಸ್ತಿತ್ವದಲ್ಲಿರುವ ವಿವಾಹದ ಪರಿಕಲ್ಪನೆಗೆ ಸಮಾನವಾಗಿ ಪರಿಗಣಿಸಲು ಹೊರಟರೆ ಅದು "ಪ್ರತಿಯೊಬ್ಬ ನಾಗರಿಕನ ಹಿತಾಸಕ್ತಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ಹೇಳಿದೆ. ಒಂದು ವೇಳೆ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಿ ನ್ಯಾಯಾಲಯ ಆದೇಶ ನೀಡಿದರೆ ಅದು ಕಾನೂನಿನ ಒಂದು ಇಡೀ ಶಾಖೆಯನ್ನು ಪುನಃ ಬರೆದಂತಾಗುತ್ತದೆ. ನ್ಯಾಯಾಲಯವು ಅಂಥ ಆದೇಶ ನೀಡಬಾರದು ಎಂದು ಬಲವಾಗಿ ವಾದಿಸಿದೆ.