ಕಾಸರಗೋಡು (ಕೇರಳ): ಸರ್ಕಾರಿ ಆಸ್ಪತ್ರೆಗಳೆಂದರೆ ರೋಗಿಗಳು ಅಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ಬಹುತೇಕರು ಉತ್ತಮ ಚಿಕಿತ್ಸೆ ದೊರೆಯುತ್ತೆ ಎಂದು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದುಂಟು. ಕೆಲವರು ಖಾಸಗಿ ಆಸ್ಪತ್ರೆಗಳಿಗೆ ತೆರಳುವಷ್ಟು ದುಡ್ಡು ನಮ್ಮ ಬಳಿ ಇಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿ, ಸರ್ಕಾರಿ ಆಸ್ಪತ್ರೆಗೆ ಹೋದರೆ ಕೆಲವೆಡೆ ನರಕಯಾತನೆಯ ಅನುಭವ ಆದ ಪ್ರಕರಣಗಳು ಆಗಾಗ್ಗೆ ಕಂಡುಬರುತ್ತವೆ. ಇಂತಹದ್ದೇ ಒಂದು ಕೇಸ್ ಕೇರಳದ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ.
ಹೌದು, ಕಾಸರಗೋಡು ಜನರಲ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ಲಿಫ್ಟ್ ಕೆಟ್ಟಿರುವುದರಿಂದ ಡಿಸ್ಚಾರ್ಜ್ ಆದ ರೋಗಿಯೊಬ್ಬರನ್ನು ಕಾರ್ಮಿಕರು ಆರನೇ ಮಹಡಿಯಿಂದ ನೆಲಮಹಡಿಗೆ ಹೊತ್ತುಕೊಂಡು ಬಂದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಲಿಫ್ಟ್ ಕೆಟ್ಟಿದ್ದು, ರೋಗಿಗಳು ಪರದಾಡುವಂತಾಗಿದೆ.
ವ್ಯಕ್ತಿಯೊಬ್ಬರು ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವ್ಯಕ್ತಿಗೆ ಆಸ್ಪತ್ರೆಯ ಆರನೇ ಮಹಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ ಈ ವ್ಯಕ್ತಿಯು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇವರನ್ನು ಆರನೇ ಮಹಡಿಯಿಂದ ನೆಲಮಹಡಿಗೆ ಕರೆದುಕೊಂಡು ಬರಬೇಕಿತ್ತು. ಆದರೆ ಆಸ್ಪತ್ರೆಯ ಲಿಫ್ಟ್ ಕೆಟ್ಟಿದ್ದರಿಂದ ಮತ್ತು ರೋಗಿಗಳನ್ನು ಸ್ಟ್ರೆಚರ್ನಲ್ಲಿ ಸಾಗಿಸಲು ಬೇಕಾದ ರ್ಯಾಂಪ್ ವ್ಯವಸ್ಥೆ ಇಲ್ಲದ ಕಾರಣ ರೋಗಿಯ ಸಂಬಂಧಿಕರು ರೋಗಿಯನ್ನು ಹೊತ್ತುಕೊಂಡು ಬರಲು ಕಾರ್ಮಿಕರನ್ನು ಸಂಪರ್ಕಿಸಿದ್ದರು. ಈ ಕಾರ್ಮಿಕರು ರೋಗಿಯನ್ನು ಸ್ಟ್ರೆಚರ್ನಲ್ಲಿ ಹೊತ್ತುಕೊಂಡು ಆರನೇ ಮಹಡಿಯಿಂದ ನೆಲಮಹಡಿಗೆ ಕರೆದುಕೊಂಡು ಬಂದಿದ್ದಾರೆ. ಇನ್ನು, ಈ ದೃಶ್ಯವನ್ನು ಮೊಬೈಲಿನಲ್ಲಿ ಸೆರೆಹಿಡಿಯಲಾಗಿದ್ದು, ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.