ಕಡಪ (ಆಂಧ್ರಪ್ರದೇಶ):ಪೊಲೀಸ್ ಹೆಡ್ ಕಾನ್ಸ್ಟೇಬಲ್ವೊಬ್ಬರು ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಗುಂಡಿಕ್ಕಿ ಕೊಂದು ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕಡಪ ನಗರದಲ್ಲಿ ಗುರುವಾರ ನಡೆದಿದೆ. 55 ವರ್ಷದ ಆಂಧ್ರಪ್ರದೇಶ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ವರಲು, 45 ವರ್ಷದ ತನ್ನ ಪತ್ನಿ ಮತ್ತು 20 ವರ್ಷದ ಹಿರಿಯ ಮಗಳು ಹಾಗೂ 16 ವರ್ಷದ ಕಿರಿಯ ಮಗಳ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ ಮತ್ತು ಮಕ್ಕಳ ಮೃತದೇಹಗಳು ಒಂದೆಡೆ ಪತ್ತೆಯಾದರೆ, ವೆಂಕಟೇಶ್ವರಲು ಅವರ ಮೃತದೇಹ ಮತ್ತೊಂದೆಡೆ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಲ್ಲಿನ ಸಹಕಾರಿ ಕಾಲೋನಿಯಲ್ಲಿರುವ ವಾಸವಿದ್ದ ಮೃತ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ವರಲು ಎರಡನೇ ಟೌನ್ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದರು. ಬುಧವಾರ ತಡರಾತ್ರಿ ಮತ್ತು ಗುರುವಾರ ನಸುಕಿನ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ.
ಮೃತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ವರಲು ಅವರ ಹಿರಿಯ ಮಗಳು ಪದವಿಯ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದು, ಕಿರಿಯವಳು 10ನೇ ತರಗತಿಯಲ್ಲಿ ಓದುತ್ತಿದ್ದಳು. ಅವರ ಹೆಂಡತಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು ಎಂದು ಕಡಪ ಉಪ- ವಿಭಾಗೀಯ ಪೊಲೀಸ್ ಅಧಿಕಾರಿ ಎಂ.ಡಿ. ಶರೀಫ್ ಅವರು ಹೇಳಿದ್ದಾರೆ.