ಬೆಂಗಳೂರು/ಹೈದರಾಬಾದ್:ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಅವರು ಭಾನುವಾರ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಪರ್ಯಾಯ ರಾಜಕೀಯ ಕೂಟ ರಚಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
ಹೈದರಾಬಾದ್‌ನ ಸಿಎಂ ಕಚೇರಿ ಪ್ರಗತಿ ಭವನದಲ್ಲಿ ಕೆಸಿಆರ್ ಅವರನ್ನು ಭೇಟಿಯಾದ ಹೆಚ್ಡಿಕೆ ಅತ್ಯಂತ ಮಹತ್ವದ ಮಾತುಕತೆ ನಡೆಸಿದರು. ಕರ್ನಾಟಕ, ತೆಲಂಗಾಣ ರಾಜ್ಯಗಳ ರಾಜಕೀಯ ಸ್ಥಿತಿಗತಿಗಳ ಕುರಿತು ಹಾಗೂ ಸದ್ಯದ ರಾಷ್ಟ್ರ ರಾಜಕಾರಣದ ಬಗ್ಗೆ ಸಮಾಲೋಚಿಸಲಾಯಿತು.
ಈ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಹೈದರಾಬಾದ್‌ನ ಪ್ರಗತಿ ಭವನದಲ್ಲಿ ಭೇಟಿಯಾಗಿ ಅತ್ಯಂತ ಮಹತ್ವದ ಸ್ನೇಹಪೂರ್ವಕ ಮಾತುಕತೆ ನಡೆಸಲಾಯಿತು. ಕರ್ನಾಟಕ, ತೆಲಂಗಾಣ ರಾಜ್ಯಗಳ ರಾಜಕೀಯ ಸ್ಥಿತಿಗತಿಗಳ ಕುರಿತು ಹಾಗೂ ಸದ್ಯದ ರಾಷ್ಟ್ರ ರಾಜಕಾರಣದ ಬಗ್ಗೆ ಸಮಾಲೋಚನೆ ನಡೆಯಿತು ಎಂದು ಹೇಳಿದ್ದಾರೆ.
ಅಲ್ಲದೇ, ರಾಷ್ಟ್ರ ರಾಜಕಾರಣಕ್ಕೆ ಪರಿಣಾಮಕಾರಿ ತಿರುವು ನೀಡಿ, ರಾಷ್ಟ್ರೀಯ ಪಕ್ಷಗಳಿಗೆ ಹೊರತಾದ ರೈತ, ಕಾರ್ಮಿಕ, ದೀನದಲಿತ ಮತ್ತು ಒಟ್ಟಾರೆ ಶ್ರೀಸಾಮಾನ್ಯನ ಪರವಾದ ದನಿಯುಳ್ಳ ಪರ್ಯಾಯ ರಾಜಕೀಯ ಕೂಟ ರಚಿಸುವ ತಮ್ಮ ಮನದಿಂಗಿತವನ್ನು ನನ್ನೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಅವರಿಗೆ ಶುಭ ಹಾರೈಸಿದೆ ಹಾಗೂ ಜೊತೆಯಲ್ಲಿ ನಿಲ್ಲುವುದಾಗಿ ಭರವಸೆಯನ್ನು ನೀಡಿದೆ ಎಂದೂ ಹೆಚ್ಡಿಕೆ ಮತ್ತೊಂದು ಟ್ವೀಟ್ ಮಾಡಿದ್ದಾರೆ.