ನವದೆಹಲಿ:ಕೋವಿಡ್ ಎರಡನೇ ಅಲೆಯಲ್ಲಿ ಸಿಲುಕಿ ದೇಶವು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನೂತನ ಸಂಸತ್ ಭವನ ಹಾಗು ಪ್ರಧಾನಿ ನಿವಾಸವನ್ನು ಹೊಂದಿರುವ ಬೃಹತ್ ಸೆಂಟ್ರಲ್ ವಿಸ್ತಾ ಯೋಜನೆ ಮುಂದುವರಿಸಲು ಅನುಮತಿ ನೀಡಬೇಕೆ ಎಂಬುದನ್ನು ದೆಹಲಿ ಹೈಕೋರ್ಟ್ ಸೋಮವಾರ (ನಾಳೆ) ತೀರ್ಮಾನಿಸುತ್ತದೆ.
ಸೆಂಟ್ರಲ್ ವಿಸ್ತಾ ಯೋಜನೆಯಡಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾ.ಜ್ಯೋತಿ ಸಿಂಗ್ ಅವರ ನ್ಯಾಯಪೀಠವು ಮೇ 31 ರಂದು ಅದರ ತೀರ್ಪು ನೀಡಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸೆಂಟ್ರಲ್ ವಿಸ್ಟಾ ಯೋಜನೆ ಕೈಬಿಡಿ, ಆ ಖರ್ಚನ್ನು ಕೋವಿಡ್ ಪರಿಹಾರಕ್ಕೆ ಬಳಸಿ: ಪ್ರಿಯಾಂಕಾ
ಸದ್ಯದ ಪರಿಸ್ಥಿತಿಯಲ್ಲಿ ಯೋಜನೆಯು ಅಗತ್ಯವಲ್ಲ. ಹೀಗಾಗಿ ಇದನ್ನು ಕೆಲಕಾಲ ತಡೆಹಿಡಿಯಬಹುದು ಎಂಬ ಭಾಷಾಂತರಕಾರ ಅನ್ಯಾ ಮಲ್ಹೋತ್ರಾ ಹಾಗೂ ಇತಿಹಾಸಕಾರ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕ ಸೊಹೈಲ್ ಹಶ್ಮಿ ಅವರ ಜಂಟಿ ಮನವಿಯ ಮೇರೆಗೆ ನ್ಯಾಯಾಲಯವು ತನ್ನ ತೀರ್ಪನ್ನು ಮೇ 17 ರಂದು ಕಾಯ್ದಿರಿಸಿತ್ತು.
ಭಾರತದಲ್ಲಿ ಕೊರೊನಾ ಮೊದಲನೇ ಅಲೆ ಅಬ್ಬರ ನಿಲ್ಲಿಸುತ್ತಿದ್ದಂತೆಯೇ ಸೆಂಟ್ರಲ್ ವಿಸ್ತಾ ಯೋಜನೆಯಡಿ 971 ಕೋಟಿ ರೂ. ವೆಚ್ಚದ ನೂತನ ಸಂಸತ್ ಭವನ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಡಿಪಾಯ ಹಾಕಿತ್ತು. 64,500 ಚದರ ಮೀಟರ್ ಪ್ರದೇಶದಲ್ಲಿ ಇದು ನಿರ್ಮಾಣವಾಗಲಿದ್ದು, 2020ರ ಡಿಸೆಂಬರ್ 10ರಂದು ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದರು.
ಇದನ್ನೂ ಓದಿ: ಕೋವಿಡ್ ಹೆಮ್ಮಾರಿ ಮಧ್ಯೆ ಸೆಂಟ್ರಲ್ ವಿಸ್ಟಾ ಯೋಜನೆ ಮುಂದುವರಿಸಬೇಕೆ?; ತಜ್ಞರ ಅಭಿಪ್ರಾಯವೇನು?
ಇದೀಗ ಮತ್ತೆ ಕೋವಿಡ್ ಉಲ್ಬಣಗೊಂಡಿದ್ದು, ಭಾರತದ ಆರೋಗ್ಯ ಕ್ಷೇತ್ರ ದುಸ್ಥಿತಿ ಎದುರಿಸುತ್ತಿತುವ ವೇಳೆ ಸೆಂಟ್ರಲ್ ವಿಸ್ತಾ ಯೋಜನೆ ಬೇಕೆ ಎಂದು ಅನೇಕ ವಿದೇಶಿ ಮಾಧ್ಯಮಗಳು ಮೋದಿ ಸರ್ಕಾರವನ್ನು ಟೀಕಿಸಿದ್ದವು. ಹಲವು ತಜ್ಞರು ಕೂಡ ಯೋಜನೆ ಸ್ಥಗಿತಗೊಳಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.