ಮುಂಬೈ (ಮಹಾರಾಷ್ಟ್ರ):ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಎನ್ಸಿಪಿ ನಾಯಕ ಅನಿಲ್ ದೇಶಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ಆದರೂ, ಅವರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ. ಜೈಲಿನಲ್ಲೇ ಅವರು ಇರಬೇಕಾಗಿದೆ.
ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಮಾಡಿದ 100 ಕೋಟಿ ರೂಪಾಯಿ ವಸೂಲಿ ಆರೋಪದ ಮೇಲೆ ಅನಿಲ್ ದೇಶಮುಖ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭ್ರಷ್ಟಾಚಾರ ಪ್ರಕರಣ ದಾಖಲಿಸಿತ್ತು. ಇದರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವು ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು.
ಇದಾದ ನಂತರ 2021ರ ನವೆಂಬರ್ 2ರಂದು ಇಡಿ ಅಧಿಕಾರಿಗಳು ಅನಿಲ್ ದೇಶಮುಖ್ ಅವರನ್ನು ಬಂಧಿಸಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರ ಜಾಮೀನು ಅರ್ಜಿಯು ಕಳೆದ ಆರು ತಿಂಗಳಿನಿಂದ ಬಾಕಿ ಉಳಿದಿರುವುದರಿಂದ ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಮಾನಿಸುವಂತೆ ಸುಪ್ರೀಂಕೋರ್ಟ್ ಹೈಕೋರ್ಟ್‌ಗೆ ಸೂಚಿಸಿತ್ತು.
ಇದನ್ನೂ ಓದಿ:ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ FIR ದಾಖಲಿಸಿದ ಸಿಬಿಐ
ಅಂತೆಯೇ, ನ್ಯಾಯಮೂರ್ತಿ ಎನ್ಜೆ ಜಮಾದಾರ್ ಅವರು ಜಾಮೀನು ಅರ್ಜಿ ವಿಚಾರಣೆ ನಡೆಸಿತು. ಈ ವೇಳೆ ಅನಿಲ್ ದೇಶಮುಖ್ ಪರ ವಕೀಲರಾದ ವಿಕ್ರಂ ಚೌಧರಿ ಮತ್ತು ಅನಿಕೇತ್ ನಿಕಂ ವಾದ ಮಂಡಿಸಿ ಅನಿಲ್ ದೇಶಮುಖ್ ಅವರಿಗೆ 72 ವಯಸ್ಸಾಗಿದ್ದು, ಅವರ ಆರೋಗ್ಯ ಮತ್ತು ವಿರುದ್ಧ ಯಾವುದೇ ಕ್ರಿಮಿನಲ್ ಆರೋಪಿಗಳು ಇರುವ ಅಂಶವನ್ನು ಪರಿಗಣಿಸಿ ಜಾಮೀನು ನೀಡಬೇಕೆಂದು ಮನವಿ ಮಾಡಿದರು.
ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದ ಮಂಡಿಸಿ, ಅನಿಲ್ ದೇಶಮುಖ್ ಜಾಮೀನು ಅರ್ಜಿಯನ್ನು ವಿರೋಧಿದ್ದರು. ಜೈಲು ಆಸ್ಪತ್ರೆಯಲ್ಲಿನ ಆರೋಗ್ಯ ತಪಾಸಣೆ ಪ್ರಕಾರ ಯಾವುದೇ ಕಾಯಿಲೆಗಳಿಂದ ದೇಶಮುಖ್ ಬಳಲುತ್ತಿಲ್ಲ ಎಂದು ವಾದಿಸಿದರು. ಆದರೆ, ನ್ಯಾಯಾಲವು ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಲಕ್ಷದ ಶ್ಯೂರಿಟಿ ಮೇಲೆ ಜಾಮೀನು ಮಾಡಿದ ಆದೇಶ ಹೊರಡಿಸಿತು.
ಜಾಮೀನಿಗೆ ಇಡಿ ಆಕ್ಷೇಪ: ಮತ್ತೊಂದೆಡೆ ಇಡಿ ದೇಶಮುಖ್ ಅವರ ಜಾಮೀನನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿತ್ತು. ಅಲ್ಲದೇ, ಜಾಮೀನು ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಕಾಲಾವಕಾಶ ನೀಡಬೇಕೆಂದು ಇಡಿ ಮನವಿ ಮಾಡಿತು.
ಈ ಬೇಡಿಕೆಯನ್ನು ಅಂಗೀಕರಿಸಿದ ನ್ಯಾಯಾಲಯವು ತನ್ನ ಜಾಮೀನಿಗೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಿತು. ಅಂದರೆ, ಅಕ್ಟೋಬರ್ 13ರೊಳಗೆ ಇಡಿ ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಬಹುದು. ಇನ್ನೊಂದೆಡೆ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಇನ್ನೂ ಬಾಕಿ ಇದೆ. ಇದರಿಂದಲೂ ಅನಿಲ್ ದೇಶಮುಖ್ ಜೈಲಿನಲ್ಲೇ ಉಳಿಯಬೇಕಾಗಿದೆ.
ದೇಶಮುಖ್ ವಿರುದ್ಧದ ಆರೋಪ ಏನು?: ಗೃಹ ಸಚಿವರಾಗಿದ್ದ ಅನಿಲ್ ದೇಶಮುಖ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮುಂಬೈನ ವಿವಿಧ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ 4.7 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಅಕ್ರಮವಾಗಿ ಗಳಿಸಿದ ಈ ಹಣವನ್ನು ತಮ್ಮ ಕುಟುಂಬಕ್ಕೆ ಸೇರಿದ ನಾಗ್ಪುರ ಮೂಲದ ಶ್ರೀಸಾಯಿ ಶಿಕ್ಷಣ ಸಂಸ್ಥೆಗೆ ವರ್ಗಾಹಣೆ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
ಇದನ್ನೂ ಓದಿ:1998ರಲ್ಲಿ 45 ರೂ. ಕಳವು.. ಸುದೀರ್ಘ 24 ವರ್ಷಗಳ ವಿಚಾರಣೆ.. ಅಪರಾಧಿಗೆ 4 ದಿನ ಜೈಲು!