ನವದೆಹಲಿ :ಸಹೋದರ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ರಾಮಾಯಣದಲ್ಲಿ ಬರುವ ಬಹುತಲೆಯ ರಾವಣ ಎಂದು ಬಿಂಬಿಸುವ ಗ್ರಾಫಿಕ್ ಅನ್ನು ಬಿಜೆಪಿ ಹೊರ ತಂದಿರುವುದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಪ್ರಚೋದನಕಾರಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಿಯಾಂಕಾ, "ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಅಧೋಗತಿಗೆ ಕೊಂಡೊಯ್ಯಲು ಬಯಸುತ್ತೀರಿ?, ಅಧಿಕೃತ ಟ್ವಿಟರ್‌ನಿಂದ ಪೋಸ್ಟ್ ಮಾಡಲಾಗುತ್ತಿರುವ ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು ನೀವು ಒಪ್ಪುತ್ತೀರಾ?, ಪ್ರಮಾಣ ವಚನಗಳನ್ನು ಮರೆತಿದ್ದೀರಾ ?, ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುವ ಈ ಪ್ರಚೋದನಕಾರಿ ಟ್ವೀಟ್‌ಗಳನ್ನು ಹೇಗೆ ಅನುಮೋದಿಸುತ್ತಿದ್ದೀರಿ" ಎಂದು ಕೇಳಿದ್ದಾರೆ.
ಬಿಜೆಪಿ ಟ್ವೀಟ್...:ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯು ರಾಹುಲ್ ಗಾಂಧಿ ವಿರುದ್ಧ ಕಟುವಾದ ದಾಳಿಯನ್ನು ಪ್ರಾರಂಭಿಸಿದೆ. ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪೌರಾಣಿಕ ಪಾತ್ರದಲ್ಲಿ ಬರುವ ರಾವಣ ಎಂದು ಬಿಂಬಿಸುವ ಗ್ರಾಫಿಕ್ ಅನ್ನು ಹಂಚಿಕೊಳ್ಳುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ವಾಗ್ದಾಳಿ ನಡೆಸಿತ್ತು.