ಹಥ್ರಾಸ್(ಉತ್ತರ ಪ್ರದೇಶ):ಹಥ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬ ಸದಸ್ಯರು ಬುಧವಾರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಸಂತ್ರಸ್ತೆಯ ಕುಟುಂಬದ ಪರ ವಕೀಲೆ ಸೀಮಾ ಕುಶ್ವಾಹಾ ಹೇಳಿದ್ದಾರೆ.
ಸಂತ್ರಸ್ತೆಯ ಕುಟುಂಬದ ವಕೀಲರಾದ ಸೀಮಾ ಕುಶ್ವಾಹಾ ಅವರ ಪ್ರಕಾರ, "ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ನಾನು ಭದ್ರತಾ ಕಾರಣಗಳಿಂದಾಗಿ ಬುಧವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದಿರಲು ನಿರ್ಧರಿಸಿದ್ದೇವೆ. ನನ್ನ ಪರವಾಗಿ, ತೀರ್ಪಿನ ಬಗ್ಗೆ ತಿಳಿಸುವ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗುವುದು."
ಮಾರ್ಚ್ 5 ರಂದು, ನ್ಯಾಯಾಲಯದ ಕೊಠಡಿಯಲ್ಲಿ ಜನರ ಗುಂಪೊಂದು ಸಂತ್ರಸ್ತೆಯ ಕುಟುಂಬ ಮತ್ತು ಅವರ ಸಲಹೆಗಾರರಿಗೆ ಬೆದರಿಕೆ ಹಾಕಿದೆ ಎಂದು ಆರೋಪಿಸಿದ ನಂತರ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಘಟನೆಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಹಥ್ರಾಸ್ ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿತ್ತು.
ಇದನ್ನೂ ಓದಿ:ಮುಂದಿನ ಸಿಜೆಐ ಆಗಿ ನ್ಯಾ.ಎನ್.ವಿ.ರಮಣ ನೇಮಕಕ್ಕೆ ಮುಖ್ಯನ್ಯಾಯಮೂರ್ತಿ ಬೊಬ್ಡೆ ಶಿಫಾರಸು
ಲಖನೌದಲ್ಲಿ ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ (ಮಾರ್ಚ್ 19 ರಂದು) ಸಿಬಿಐ ಈ ಪ್ರಕರಣವನ್ನು ಹಥ್ರಾಸ್‌ನಿಂದ ರಾಜ್ಯದ ಯಾವುದೇ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈಗ, ಮುಂದಿನ ವಿಚಾರಣೆಯಲ್ಲಿ ಏನು ಮಾಡಬೇಕೆಂದು ಹೈಕೋರ್ಟ್ ನಿರ್ಧರಿಸುತ್ತದೆ ಎಂದು ಸೀಮಾ ಕುಶ್ವಾಹಾ ಹೇಳಿದರು.
2020 ಸೆಪ್ಟೆಂಬರ್ 14 ರಂದು ಹಥ್ರಾಸ್ ಜಿಲ್ಲೆಯಲ್ಲಿ ದಲಿತ ಮಹಿಳೆಯ ಮೇಲೆ ನಾಲ್ವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದಾರ್ಗಂಜ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಕೊನೆಯುಸಿರೆಳೆದಿದ್ದಳು ಮತ್ತು ಆಕೆಯ ಶವವನ್ನು ಜಿಲ್ಲಾಡಳಿತವು ರಾತ್ರಿ ವೇಳೆ ಕುಟುಂಬದ ಒಪ್ಪಿಗೆಯಿಲ್ಲದೆ ದಹನ ಕ್ರಿಯೆ ನಡೆಸಿತ್ತು ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.