ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಇದೇ ತಿಂಗಳ ಅ.9 ರಂದು ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಇದರ ಬೆನ್ನಲ್ಲೇ ಎಲ್ಲೆಡೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಕೇಜಿಗಟ್ಟಲೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಬಶೀರ್ ಬಾಗ್ನಲ್ಲಿ 16 ಕೆ.ಜಿ ಚಿನ್ನ, ಚಂದಾನಗರದಲ್ಲಿ 6 ಕೆ.ಜಿ, ಮಿಯಾಪುರದಲ್ಲಿ 17 ಕೆ.ಜಿ, ನಗರದ ಹೊರವಲಯದಲ್ಲಿ 28.09 ಕೆ.ಜಿ, ಜಿನೋಮ್ ವ್ಯಾಲಿ ಬಳಿ 9 ಕೆ.ಜಿ ಚಿನ್ನವನ್ನು ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದುದರಿಂದ ಪೊಲೀಸರು ತಪಾಸಣೆ ವೇಳೆ ವಶಪಡಿಸಿಕೊಂಡರು. ದ್ವಿಚಕ್ರ ಹಾಗೂ ಕಾರುಗಳಲ್ಲಿ ಕಚ್ಚಾ ಬಿಸ್ಕತ್ ಹಾಗೂ ಆಭರಣಗಳನ್ನು ಅಪಾರ ಪ್ರಮಾಣದಲ್ಲಿ ಸಾಗಿಸಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಕೆಂಪೇಗೌಡ ಏರ್ಪೋರ್ಟ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಕೋಟಿ ಮೌಲ್ಯದ 1.7 ಕೆಜಿ ಚಿನ್ನ ಜಪ್ತಿ
ಹಳೇ ನಗರ, ಬೇಗಂ ಬಜಾರ್, ಸಿಕಂದರಾಬಾದ್, ಅಬಿಡ್ಸ್, ಕಾಟೇದಾನ, ಆದಿಭಟ್ಲ ಮತ್ತಿತರ ಪ್ರಮುಖ ಪ್ರದೇಶಗಳಲ್ಲಿರುವ ಮಧ್ಯವರ್ತಿಗಳ ಕೈಗೆ ಕದ್ದ ಚಿನ್ನಾಭರಣಗಳು ಸೇರುತ್ತಿರುವುದು ಬಹಿರಂಗ ರಹಸ್ಯವಾಗಿದೆ. ಚುನಾವಣೆ ವೇಳೆಯಲ್ಲಿ ತಪಾಸನೆ ನಡೆಸಿದಾಗ ಸಿಕ್ಕ ಚಿನ್ನ ಇಷ್ಟಾದರೆ, ಸಾಮಾನ್ಯ ದಿನಗಳಲ್ಲಿ ಚಿನ್ನದ ಕಳ್ಳಸಾಗಣೆ ಎಷ್ಟಿರಬಹುದು ಎಂದು ಊಹಿಸಬಹುದು. ಈ ಮೂಲಕ ಹೈದರಾಬಾದ್ ಚಿನ್ನ ಕಳ್ಳಸಾಗಣೆಯ ಪ್ರಮುಖ ಕೇಂದ್ರವಾಗುತ್ತಿದೆ ಎಂದು ಅಧಿಕಾರಿ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಿಮಾನದ ಶೌಚಾಲಯದ ವಾಶ್ ಬೇಸಿನ್ನಲ್ಲಿ 1.8 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ..
ಸೌದಿ, ದುಬೈ, ಸಿಂಗಾಪುರದಿಂದ ನಗರಕ್ಕೆ ವಿವಿಧ ರೂಪಗಳಲ್ಲಿ ಚಿನ್ನ ಕಳ್ಳಸಾಗಣೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ಟ್ರಾವೆಲ್ಸ್ ಕಂಪನಿಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ನಗರದಿಂದ ಗಲ್ಫ್ ದೇಶಗಳಿಗೆ ಪ್ರವಾಸಿ ವೀಸಾದಲ್ಲಿ ಕಳುಹಿಸುತ್ತವೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ನಂತರ, ಅಲ್ಲಿನ ಕಳ್ಳಸಾಗಣೆದಾರರು ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಇಲ್ಲಿಂದ ಹೋದ ವ್ಯಕ್ತಿಗಳಿಗೆ ಚಿನ್ನ ತಲುಪಿಸುತ್ತಾರೆ. ಚಿನ್ನವನ್ನು ಸುರಕ್ಷಿತವಾಗಿ ವಿಮಾನ ನಿಲ್ದಾಣದಿಂದ ಹೊರಕ್ಕೆ ತಂದರೆ 10,000 ಸಾವಿರ ರೂ. ಗಳಿಂದ 25,000 ರೂ.ಗಳವರೆಗೆ ಕಮಿಷನ್ ನೀಡಲಾಗುತ್ತದೆ. ಅಲ್ಲದೆ, ಬಾಂಗ್ಲಾದೇಶ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಸಮುದ್ರ ಮಾರ್ಗವಾಗಿ ಕೇರಳ, ತಮಿಳುನಾಡು, ಗುಜರಾತ್‌ಗೆ ತಲುಪಿರುವ ಲೆಕ್ಕಕ್ಕೆ ಸಿಗದ ಚಿನ್ನ ಹೈದರಾಬಾದ್ ನಗರಕ್ಕೂ ತಲುಪುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಮುದ್ರ, ವಿಮಾನದ ಮೂಲಕ ಚಿನ್ನ ಕಳ್ಳ ಸಾಗಣೆ.. 12 ಕೋಟಿ ಮೌಲ್ಯದ ಬಂಗಾರ ವಶ!