ಚಂಡೀಗಡ(ಹರಿಯಾಣ): ಕೊರೊನಾ ವೈರಸ್ಗೆ ಸಿದ್ಧಪಡಿಸಲಾಗಿರುವ ಸಂಭಾವ್ಯ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಮೊದಲ ಸ್ವಯಂಸೇವಕರಾಗಲು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಮುಂದಾಗಿದ್ದಾರೆ.
ಈ ಬಗ್ಗೆ ಗುರುವಾರದಂದು ಟ್ವೀಟ್ ಮಾಡಿರುವ ಆರೋಗ್ಯ ಸಚಿವರು, ಪಿಜಿಐ ರೋಹ್ಟಕ್ ಮತ್ತು ಆರೋಗ್ಯ ಇಲಾಖೆಯ ವೈದ್ಯರ ತಂಡದ ತಜ್ಞರ ಮೇಲ್ವಿಚಾರಣೆಯಲ್ಲಿ ಅಂಬಾಲಾ ಕ್ಯಾಂಟ್ನ ಸಿವಿಲ್ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಭಾರತ್ ಬಯೋಟೆಕ್ ಉತ್ಪನ್ನದ ಕೊರೊನಾ ವೈರಸ್ ಲಸಿಕೆ ಕೊವ್ಯಾಕ್ಸಿನ್ ಟ್ರಯಲ್ ಡೋಸ್ ಅನ್ನು ತನಗೆ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ.
ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗವು ನವೆಂಬರ್ 20 ರಿಂದ ಹರಿಯಾಣ ರಾಜ್ಯದಲ್ಲಿ ಪ್ರಾರಂಭವಾಗಲಿದ್ದು, ನಾನು ಈ ವ್ಯಾಕ್ಸಿನ್ ಪ್ರಯೋಗಕ್ಕೆ ಸ್ವಯಂಪ್ರೇರಿತನಾಗಿ ಸಿದ್ಧನಾಗಿದ್ದೇನೆ. ಈ ಲಸಿಕೆ ಯಶಸ್ವಿಯಾಗಲಿದೆ ಎಂಬ ಆಶಾಭಾವನೆ ನನ್ನಲ್ಲಿದೆ ಎಂದು ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸುತ್ತಿದೆ. ಕಳೆದ ತಿಂಗಳು, ಲಸಿಕೆ ತಯಾರಿಕಾ ಕಂಪನಿ ಹಂತ 1 ಮತ್ತು 2ರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ 3 ನೇ ಹಂತದ ಪ್ರಯೋಗಗಳನ್ನು ಪ್ರಾರಂಭಿಸಲು ಸಕಲ ಸಿದ್ಧತೆ ನಡೆಸಿದೆ.
ಈ 3 ನೇ ಹಂತದ ಪ್ರಯೋಗವು ಭಾರತದ 25 ಕೇಂದ್ರಗಳಲ್ಲಿ 26,000 ಸ್ವಯಂಸೇವಕರನ್ನು ಒಳಗೊಂಡಿದ್ದು, ಐಸಿಎಂಆರ್ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ ಎಂದು ಭಾರತ್ ಬಯೋಟೆಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದು ಭಾರತದಲ್ಲಿ ಕೊರೊನಾ ಲಸಿಕೆಗಾಗಿ ನಡೆಸಿದ ಅತಿದೊಡ್ಡ ಕ್ಲಿನಿಕಲ್ ಪ್ರಯೋಗವಾಗಿದೆ.