ಹರಿಯಾಣ :ಜುಲೈ 31ರ ಸೋಮವಾರದಂದು ಹರಿಯಾಣದ ನುಹ್ನಲ್ಲಿ ನಡೆದ ಬ್ರಜ್ ಮಂಡಲ್ ಯಾತ್ರೆಯಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಹಿಂಸಾತ್ಮಕ ಘರ್ಷಣೆ ಬಳಿಕ ನುಹ್ (ಎಸ್ಪಿ) ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಐಪಿಎಸ್ ನರೇಂದರ್ ಬಿಜರ್ನಿಯಾ ಈಗ ನುಹ್ ಜಿಲ್ಲೆಯ ಪೂರ್ಣಾವಧಿ ಎಸ್ಪಿಯಾಗಲಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 176 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ 93 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಈ ಮಧ್ಯೆ, ಹರಿಯಾಣ ಸರ್ಕಾರ ದೊಡ್ಡ ಕ್ರಮ ಕೈಗೊಂಡಿದ್ದು, ನುಹ್ ಎಸ್ಪಿ ವರುಣ್ ಸಿಂಗ್ಲಾ ಅವರನ್ನು ವರ್ಗಾವಣೆ ಮಾಡಿದೆ. ವರುಣ್ ಸಿಂಗ್ಲಾ ಅವರನ್ನು ಭಿವಾನಿಗೆ ಕಳುಹಿಸಲಾಗಿದ್ದು, ಭಿವಾನಿಯ ಎಸ್ಪಿ ನರೇಂದ್ರ ಬಿಜರ್ನಿಯಾ ಅವರಿಗೆ ನುಹ್ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರುವಂತೆ ಸೂಚಿಸಲಾಗಿದೆ.
ವರುಣ್ ಸಿಂಗ್ಲಾ ಅವರು ಬ್ರಜ್ ಮಂಡಲ್ ಯಾತ್ರೆಗೂ ಮುನ್ನ ರಜೆಯ ಮೇಲೆ ತೆರಳಿದ್ದರು. ಈ ಸಮಯದಲ್ಲಿ ಭಿವಾನಿಯ ಐಪಿಎಸ್ ಅಧಿಕಾರಿ ನರೇಂದ್ರ ಬಿಜರ್ನಿಯಾ ಅವರಿಗೆ ನುಹ್ ಜಿಲ್ಲೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ನರೇಂದ್ರ ಬಿಜರ್ನಿಯಾ ಅವರು ಈ ಹಿಂದೆಯೂ ಕೂಡ ನುಹ್ ಜಿಲ್ಲೆಯ ಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಏನಿದು ವಿವಾದ : ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳು ನಡೆಸಿದ ಮೆರವಣಿಗೆಯಲ್ಲಿ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿತ್ತು. ಈ ವೇಳೆ, 2 ಪೊಲೀಸರು ಸೇರಿದಂತೆ 6 ಜನರು ಸಾವನ್ನಪ್ಪಿದರು. ಹಿಂಸಾತ್ಮಕ ಘರ್ಷಣೆಯ ಬಳಿಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮತ್ತು ಸೇನಾ ಸಿಬ್ಬಂದಿ ನಿಯೋಜಿಸಲಾಗಿದೆ. ಈ ಬೆನ್ನಲ್ಲೇ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 5 ರವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.