ನುಹ್ (ಚಂಡೀಗಢ):ಹರಿಯಾಣದ ನುಹ್ ಜಿಲ್ಲೆಯಲ್ಲಿ ಸೋಮವಾರ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು 5 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಲ್ಲದೇ ಆಗಸ್ಟ್ 2 ರವರೆಗೆ ಈ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನುಹ್ ಡೆಪ್ಯುಟಿ ಕಮಿಷನರ್ ಪ್ರಶಾಂತ್ ಪನ್ವಾರ್ ಹೇಳಿದ್ದಾರೆ.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಹಿಂಸಾಚಾರ ಮೊಕ್ಕಾಂ ಹೂಡಿದ ಅರೆಸೈನಿಕ ಬೆಟಾಲಿಯನ್: ಎರಡು ಗುಂಪುಗಳ ಘರ್ಷಣೆಯಿಂದ ಇಬ್ಬರು ಹೋಮ್ ಗಾರ್ಡ್ ಮೃತಪಟ್ಟಿದ್ದು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಸದ್ಯಕ್ಕೆ ದೊಡ್ಡ ದೊಡ್ಡ ಸಭೆಗಳನ್ನು ನಡೆಸದಂತೆ ನಿಷೇಧಾಜ್ಞೆಗಳನ್ನು ಹೊರಡಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಸೇರಿದಂತೆ ಹರಿಯಾಣದಾದ್ಯಂತ ಆಗಸ್ಟ್ 1 ಮತ್ತು 2 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಉದ್ರಿಕ್ತ ಗುಂಪೊಂದು ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹಾಗಾಗಿ ನುಹ್ ಜಿಲ್ಲೆಯಲ್ಲಿ ಎಂಟು ಅರೆಸೈನಿಕ ಬೆಟಾಲಿಯನ್‌ಗಳನ್ನು ನಿಯೋಜಿಸಲಾಗಿದೆ ಎಂದು ಕಮಿಷನರ್ ಪ್ರಶಾಂತ್ ಪನ್ವಾರ್ ಹೇಳಿದ್ದಾರೆ.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಹಿಂಸಾಚಾರ ಎಲ್ಲ ಪರೀಕ್ಷೆಗಳು ಮುಂದೂಡಿಕೆ: ಆಗಸ್ಟ್ 1 ಮತ್ತು 2 ರಂದು ಹರಿಯಾಣ ಶಾಲಾ ಶಿಕ್ಷಣ ಮಂಡಳಿಯ 10ನೇ ಪೂರಕ ಮತ್ತು ಡಿಎಲ್‌ಇಡಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ, ಹಿಂಸಾಚಾರದಿಂದ ಹರಿಯಾಣದಾದ್ಯಂತ ಈ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಗಳ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಆರಂಭದಲ್ಲಿ ನುಹ್ ಮತ್ತು ಪಲ್ವಾಲ್ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿತ್ತು. ಆದರೆ, ಇದೀಗ ಹರಿಯಾಣದಾದ್ಯಂತ ಆಗಸ್ಟ್ 1 ಮತ್ತು 2 ರಂದು ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ಡಾ.ವಿ.ಪಿ.ಯಾದವ್ ತಿಳಿಸಿದ್ದಾರೆ.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಹಿಂಸಾಚಾರ 5 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿ: ಘರ್ಷಣೆಯಿಂದ ನುಹ್ ಸೇರಿದಂತೆ ಹರಿಯಾಣದ 5 ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಜೊತೆಗೆ ನುಹ್, ಫರಿದಾಬಾದ್, ಗುರುಗ್ರಾಮ್ ಮತ್ತು ಪಲ್ವಾಲ್‌ನಲ್ಲಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಕೋಚಿಂಗ್ ಸೆಂಟರ್‌ಗಳನ್ನು ಸದ್ಯಕ್ಕೆ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಡೆಪ್ಯುಟಿ ಕಮಿಷನರ್ ಪ್ರಶಾಂತ್ ಪನ್ವಾರ್ ಅವರು ಪರಿಸ್ಥಿತಿ ನಿಯಂತ್ರಣದ ಬಗ್ಗೆ ಸರ್ವ ಸಮಾಜದ ಸಭೆ ಕರೆದಿದ್ದಾರೆ.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಹಿಂಸಾಚಾರ ಘರ್ಷಣೆ ಆರಂಭಗೊಂಡಿದ್ದು ಹೀಗೆ:ಸೋಮವಾರ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಗುರುಗ್ರಾಮ, ರೇವಾರಿ, ರೋಹ್ಟಕ್, ಪಾಣಿಪತ್, ಭಿವಾನಿ, ನರ್ನಾಲ್, ಜಜ್ಜರ್, ಫರಿದಾಬಾದ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಇದ್ದಕ್ಕಿದ್ದಂತೆ ಅಲ್ಲಿಯೇ ನಿಂತಿದ್ದ ಗುಂಪೊಂದು ಮತ್ತೊಂದು ಗುಂಪಿನವರೊಂದಿಗೆ ವಾಗ್ವಾದಕ್ಕಿಳಿದಿತ್ತು. ಈ ವಾಗ್ವಾದ ವಿಕೋಪಕ್ಕೆ ಹೋಗಿದ್ದು ಕೆಲವರು ಕಲ್ಲು ತೂರಾಟ ನಡೆಸಿದ್ದರು. ಪರಿಣಾಮ ಘರ್ಷಣೆ ಕೆಲವೇ ಹೊತ್ತಲ್ಲಿ ಅಗ್ನಿಜ್ವಾಲೆಯಾಗಿ ಮಾರ್ಪಟ್ಟಿತು.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಹಿಂಸಾಚಾರ 40ಕ್ಕೂ ಹೆಚ್ಚು ವಾಹನ ಸುಟ್ಟು: ಕ್ಷಣಾರ್ಧದಲ್ಲಿ ವಿವಾದ ಹಿಂಸಾಚಾರಕ್ಕೆ ತಿರುಗಿದ್ದು ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಇದೇ ವೇಳೆ ದುಷ್ಕರ್ಮಿಗಳು 40ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಗುಂಪನ್ನು ನಿಯಂತ್ರಿಸಲು ಮುಂದಾದಾಗ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇಲ್ಲಿಯವರೆಗೆ ಈ ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿ ಮೃತಪಟ್ಟಿರುವ ಸುದ್ದಿಯಿದ್ದು, 15ಕ್ಕೂ ಹೆಚ್ಚು ಪೊಲೀಸರು ಸೇರಿದಂತೆ ಸಾರ್ವಜನಿಕರು ಕೂಡ ಗಾಯಗೊಂಡಿದ್ದಾರೆ.
ಪರಿಸ್ಥಿತಿ ಉದ್ವಿಗ್ನತೆ ಪಡೆಯುತ್ತಿದ್ದಂತೆ ರೇವಾರಿ, ಗುರುಗ್ರಾಮ್, ಫರಿದಾಬಾದ್, ಪಲ್ವಾಲ್‌ನಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆಯೆಂದರೆ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಉಗ್ರರ ಗುಂಪು ಅಂಗಡಿಗಳು, ಶೋರೂಂಗಳು ಮತ್ತು ಮನೆಗಳನ್ನು ಲೂಟಿ ಮಾಡಿದೆ. ಸಾರ್ವಜನಿಕರು ಭಯದಿಂದ ದೇವಸ್ಥಾನ ಹಾಗೂ ಅಂಗಡಿಗಳಲ್ಲಿ ಆಶ್ರಯ ಪಡೆದಿದ್ದು ಪೊಲೀಸರು ಅವರ ರಕ್ಷಣೆಯಲ್ಲಿ ತೊಡಗಿದ್ದಾರೆ. ನುಹ್ ಜಿಲ್ಲೆಯಿಂದ ಹೊತ್ತಿಕೊಂಡ ಸಣ್ಣ ಪ್ರಮಾಣದ ಕಿಡಿಯೊಂದು ಇದೀಗ ಹರಿಯಾಣದಾದ್ಯಂತ ಆವರಿಸಿದೆ.
ಕೇಂದ್ರದ ಸಹಾಯ: ಪರಿಸ್ಥಿತಿ ವಿಕೋಪಕ್ಕೆ ತಲುಪುತ್ತಿದ್ದಂತೆ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಹಾಯ ಕೋರಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಎಂಟು ಅರೆಸೇನಾ ಬೆಟಾಲಿಯನ್‌ಗಳನ್ನು ತಡರಾತ್ರಿಯೇ ಹರಿಯಾಣಕ್ಕೆ ಕಳುಹಿಸಲಾಯಿತು. ಇದರಲ್ಲಿ ಸಿಆರ್‌ಪಿಎಫ್‌ನ 5 ಬೆಟಾಲಿಯನ್‌ಗಳು ಮತ್ತು ಆರ್‌ಎಎಫ್‌ನ 3 ಬೆಟಾಲಿಯನ್‌ಗಳು ಸೇರಿವೆ. ಅರೆಸೇನಾ ಪಡೆ ತಡರಾತ್ರಿಯಿಂದ ನುಹ್ ಜಿಲ್ಲೆಯಲ್ಲಿ ಬೀಡು ಬಿಟ್ಟಿದೆ. ಶಾಂತಿ ಹಾಗೂ ಪರಿಸ್ಥಿತಿ ನಿಯಂತ್ರಣಕ್ಕಾಗಿ ನಗರದಲ್ಲಿ ಪೊಲೀಸ್ ಪಡೆಗಳ ಸಹಯೋಗದಲ್ಲಿ ಧ್ವಜ ಮೆರವಣಿಗೆಯನ್ನು ಸಹ ಕೈಗೊಳ್ಳಲಾಯಿತು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ.
ಇದನ್ನೂ ಓದಿ: ರೈಲಿನಲ್ಲಿ ಗುಂಡಿನ ದಾಳಿ ಪ್ರಕರಣ: ಆರೋಪಿ ಬಂಧನ, ಆರ್ಪಿಎಫ್ ಐಜಿ ಹೇಳಿದ್ದೇನು?