ಕರ್ನಾಟಕ

karnataka

ETV Bharat / bharat

10 ಬಾರಿ ಕಚ್ಚಿದರೂ ಬದುಕುಳಿದು 10 ವರ್ಷದಲ್ಲಿ 5,600 ಹಾವುಗಳ ರಕ್ಷಿಸಿದ ಉರಗಪ್ರೇಮಿ! - ಹರಿಯಾಣದ ಉರಗರಕ್ಷಕ

Haryana Snake protector: ಹರಿಯಾಣದ ಉರಗರಕ್ಷಕನಿಗೆ 10 ಬಾರಿ ಹಾವು ಕಚ್ಚಿದರೂ, ಅವುಗಳ ಮೇಲಿನ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಹತ್ತು ವರ್ಷಗಳಿಂದ ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾವುಗಳ ರಕ್ಷಿಸಿದ ಉರಗಪ್ರೇಮಿ
ಹಾವುಗಳ ರಕ್ಷಿಸಿದ ಉರಗಪ್ರೇಮಿ

By

Published : Aug 20, 2023, 1:17 PM IST

ಚಂಡೀಗಢ:ಹಾವು ಕಚ್ಚಿದಾಗ ಅದರ ವಿಷ ದೇಹ ಸೇರಿದರೆ ರಕ್ತ ಹೆಪ್ಪುಗಟ್ಟಿ ಸಾವು ಸಂಭವಿಸುವ ಅಪಾಯ ಹೆಚ್ಚು. ಆದರೆ, ಇಲ್ಲೊಬ್ಬ ಉರಗರಕ್ಷಕ 10 ಬಾರಿ ಸರೀಸೃಪಗಳಿಂದ ಕಚ್ಚಿಸಿಕೊಂಡರೂ ಬದುಕುಳಿದು ಒಂದು ದಶಕದಲ್ಲಿ 5,600ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಹಾವು ಹಿಡಿಯುವುದು ಇವರಿಗೆ ಮಕ್ಕಳಾಟದಷ್ಟೇ ಸಲೀಸಾಗಿದೆ.

ಹರಿಯಾಣದ ಫತೇಹಾಬಾದ್ ಜಿಲ್ಲೆಯ ಪವನ್​ ಜೋಗ್ಪಾಲ್​ ಹಾವುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡವರು. ಮನೆಗಳು, ಜನನಿಬಿಡ ಸ್ಥಳಗಳಿಗೆ ಬರುವ ಸರೀಸೃಪಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಗಾಯವಾಗಿ ಕಾಡಿಗೆ ತೆರಳಲು ಸಾಧ್ಯವಾಗದೇ ಜನರ ಕೈಗೆ ಸಿಕ್ಕು ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ವಿಷಜಂತುಗಳನ್ನೂ ಪವನ್​ ಜತನದಿಂದ ಕಾಪಾಡಿ ಕಾಡಿಗೆ ಬಿಟ್ಟು ಬಂದಿದ್ದಾರೆ.

10 ಬಾರಿ ಕಚ್ಚಿರುವ ಹಾವುಗಳು:ಹಾವುಗಳನ್ನು ರಕ್ಷಣೆ ಮಾಡುವ ವೇಳೆ ಪವನ್​ 10 ಬಾರಿ ಕಡಿತಕ್ಕೆ ಒಳಗಾಗಿದ್ದಾರೆ. ಒಂದು ಬಾರಿ ವಿಷ ದೇಹ ಸೇರಿ ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮರಳಿದ್ದರು. ಇದಾದ ಬಳಿಕವೂ ಅವರಿಗೆ ಹಾವುಗಳು ಕಚ್ಚಿವೆ. ಆದರೆ, ಅದೃಷ್ಟವಶಾತ್​ ಅವರಿಗೆ ಯಾವುದೇ ಅಪಾಯವಾಗಿಲ್ಲ. ಇದು ಜನರಿಗೆ ಅಚ್ಚರಿಯ ಸಂಗತಿ. ಆದಾಗ್ಯೂ ಇವರು ವಿಷಜಂತುಗಳ ರಕ್ಷಣೆ ಮಾಡುವ ಕೆಲಸ ಮಾತ್ರ ಬಿಟ್ಟಿಲ್ಲ.

17ನೇ ವಯಸ್ಸಿನಿಂದ ರಕ್ಷಣೆ:ಉರಗಪ್ರೇಮಿ ಪವನ್​ ತಮ್ಮ 17 ನೇ ವಯಸ್ಸಿನಿಂದಲೂ ರಕ್ಷಣಾ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ. ಆರಂಭದಲ್ಲಿ ಮನೆಗೆ ನುಗ್ಗಿದ್ದ ಹಾವನ್ನು ಜನರು ಸಾಯಿಸಲು ಮುಂದಾಗಿದ್ದರು. ಆಗ ಅದನ್ನು ಕಂಡ ಪವನ್​ ಅವರು, ರಕ್ಷಿಸಿದ್ದರು. ಅಂದಿನಿಂದ ಅವರು ಸರೀಸೃಪಗಳ ರಕ್ಷಣಾ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

"ಈಚೆಗೆ ನಾನು ರಕ್ಷಿಸಿದ ನಾಗರ ಹಾವಿನ ಮರಿಯಿಂದ ಹಿಡಿದು ದೊಡ್ಡ ಗಾತ್ರದವು ಸೇರಿದಂತೆ 5600 ಕ್ಕೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿದ್ದೇನೆ. ಫತೇಹಾಬಾದ್‌ನಲ್ಲಿ ಸ್ವಾತಂತ್ರ್ಯ ದಿನದಂದು ಕಾರ್ಯಕ್ರಮದ ಜಾಗಕ್ಕೆ ಹಾವೊಂದು ಬಂದಿತ್ತು. ಅಲ್ಲಿ ಮುಖ್ಯಮಂತ್ರಿಗಳು ರಾಷ್ಟ್ರಧ್ವಜ ಹಾರಿಸಲು ಬರುವವರಿದ್ದರು. ನನಗೆ ವಿಷಯ ತಿಳಿದು ಹಾವನ್ನು ಹಿಡಿದು ರಕ್ಷಿಸಿದೆ" ಎಂದು ಪವನ್​ ಹೇಳುತ್ತಾರೆ.

"ಅತಿಯಾದ ಮಳೆಯಿಂದಾಗಿ ಜೋಗ್ಪಾಲ್​ನಲ್ಲಿ ಪ್ರವಾಹ ಉಂಟಾಗಿತ್ತು. ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದವು. ಮರಗಳ ಮೇಲೆ ಆಶ್ರಯ ಪಡೆದ ಅನೇಕ ಹಾವುಗಳನ್ನು ರಕ್ಷಿಸಿದ್ದೇನೆ. ಅವೆಲ್ಲವನ್ನೂ ಅರಣ್ಯದಲ್ಲಿ ಬಿಡಲಾಗಿದೆ. 10 ವರ್ಷಗಳಿಂದಲೂ ವಿಷಜಂತುಗಳನ್ನು ರಕ್ಷಿಸುತ್ತಿದ್ದೇನೆ. ಅವುಗಳಲ್ಲಿ ಹೆಚ್ಚಿನವು ಹಳ್ಳಿಗಳಲ್ಲಿನ ಜನರ ಮನೆ ಮತ್ತು ತೋಟಗಳಿಗೆ ಬಂದವುಗಳೇ ಹೆಚ್ಚು" ಎನ್ನುತ್ತಾರೆ ಪವನ್​.

ಹಾವು ಹಿಡಿಯುವುದೇ ನನ್ನ ಕೆಲಸ: "ನನ್ನ ಕಣ್ಣೆದುರು ಹಾವೊಂದನ್ನು ಬಡಿದು ಕೊಲ್ಲಲಾಗಿತ್ತು. ಇದು ನನ್ನನ್ನು ಘಾಸಿ ಮಾಡಿತು. ಬಳಿಕ ಹಾವುಗಳ ಬಗ್ಗೆ ಅಧ್ಯಯನ ಮಾಡಿದೆ. ಪುಸ್ತಕಗಳನ್ನು ಓದಿ ವಿಷದ ಬಗ್ಗೆ ತಿಳಿದುಕೊಂಡೆ. ಡಿಸ್ಕವರಿ ಚಾನೆಲ್​ ನೋಡಿ ಅವುಗಳನ್ನು ಹಿಡಿಯುವ ಬಗ್ಗೆ ಅರಿತುಕೊಂಡೆ. ಹಾವುಗಳ ರಕ್ಷಣೆಯೇ ನನ್ನ ಪೂರ್ಣಾವಧಿ ಕೆಲಸವಾಗಿ ಮಾಡಿಕೊಂಡಿದ್ದೇನೆ. ಇದು ಒಂದು ದಶಕದಿಂದ ನಡೆಯುತ್ತಿದೆ" ಎಂದರು.

"ಬೇರೆ ಪ್ರಾಣಿಗಳ ರಕ್ಷಣೆಯನ್ನೂ ಮಾಡುತ್ತೇನೆ. ಗಾಯಗೊಂಡ ಪಕ್ಷಿಗಳ ಶುಶ್ರೂಷೆ ಕೂಡ ಮಾಡುತ್ತೇನೆ. ನನಗೆ ಜನರು ಕರೆ ಮಾಡಿ ಮಾಹಿತಿ ನೀಡುತ್ತಾರೆ. ರಕ್ಷಣಾ ಕಾರ್ಯಾಚರಣೆ ತಂಡವನ್ನು ರಚಿಸಿಕೊಂಡಿದ್ದೇನೆ" ಎಂದು ಪವನ್​​ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ:ಮನೆಯ ಜಂತಿ, ಕಂಬದ ಮೇಲೆಲ್ಲ ಹಾವು..5 ದಿನದಲ್ಲಿ 15 ಸರ್ಪದ ಮರಿಗಳು ಪ್ರತ್ಯಕ್ಷ, ವೃದ್ಧ ದಂಪತಿ ಕಂಗಾಲು

ABOUT THE AUTHOR

...view details