ಕರ್ನಾಲ್ (ಹರಿಯಾಣ):ಯುವಕರ ರೀಲ್ಸ್ ಮಾಡುವ ಹುಚ್ಚುತನ ಇಬ್ಬರು ಮಹಿಳೆಯರನ್ನು ಬಲಿ ಪಡೆದಿದೆ. ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಸಂಜೆ ವೇಳೆ ವಾಕಿಂಗ್ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಕಾರೊಂದು ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದು ಪರಾರಿಯಾಗಿದೆ. ಇದರಿಂದ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಮಹಿಳೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಾಹಿತಿಯ ಪ್ರಕಾರ, ಕರ್ನಾಲ್‌ನ ಸೆಕ್ಟರ್ 6 ರ ನಿವಾಸಿಗಳಾದ ಮೂವರು ಮಹಿಳೆಯರು ಸೋಮವಾರ ಸಂಜೆ ಸಾಯಿ ಮಂದಿರ ರಸ್ತೆಯಿಂದ ನೂರ್ ಮಹಲ್ ಕಡೆಗೆ ಪ್ರತಿದಿನದಂತೆ ಸಂಜೆ ವಾಕಿಂಗ್ ಹೋಗಿದ್ದರು. ಸೋಮವಾರ ಹವಾಮಾನ ವೈಪರೀತ್ಯ ಹಾಗೂ ಮಳೆಯಿಂದಾಗಿ ಸ್ವಲ್ಪ ದೂರ ಸಾಗಿ ವಾಪಸ್ ಬರುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಮೂವರನ್ನು ರಭಸವಾಗಿ ಡಿಕ್ಕಿ ಹೊಡೆದಿದೆ.
ಘಟನೆಯನ್ನು ಕಂಡ ದಾರಿ ಹೋಕರು ತಕ್ಷಣವೇ ಪೊಲೀಸರು ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮೂವರು ಮಹಿಳೆಯರಲ್ಲಿ ಅಂಜು ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಶಶಿ ಪಹ್ವಾ ಮೃತಪಟ್ಟಿದ್ದು, ಇನ್ನೊಬ್ಬಾಕೆಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಮೃತ ಅಂಜು ಸಾಯಿ ಅವರು ಸಾಯಿ ದೇವಸ್ಥಾನದಲ್ಲಿ ಭಜನಾ ಹಾಡುಗಾರ್ತಿಯಾಗಿದ್ದರು. ಇನ್ನೂ ಇಬ್ಬರು ಮಹಿಳೆಯರು ಸಹ ಪ್ರತಿದಿನ ಸಾಯಿ ದೇವಸ್ಥಾನಕ್ಕೆ ದರ್ಶನಕ್ಕೆ ಬರುತ್ತಿದ್ದರು. ಸಂಜೆ ಆರತಿ ಮುಗಿಸಿ ವಾಕಿಂಗ್ ಹೋಗುತ್ತಿದ್ದರು.
ರೀಲ್ಸ್ ವೇಳೆ ಅಪಘಾತ- ಪ್ರತ್ಯಕ್ಷದರ್ಶಿಗಳು:ಕೆಲ ಯುವಕರು ಅತಿವೇಗದಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದರು. ಮೊಬೈಲ್ನಲ್ಲಿ ವೇಗವನ್ನು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಮಹಿಳೆಯರ ಮೇಲೆ ಕಾರು ಹರಿಸಿ, ಪರಾರಿಯಾದರು. ಮಳೆ ಹಾಗೂ ಅತಿ ವೇಗದ ಕಾರಣ ವಾಹನದ ನಂಬರ್ ಅನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸುತ್ತಮುತ್ತಲ ಜನರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಪಡೆದ ಕರ್ನಾಲ್ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗೀತಾ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುವನ್ನು ಕರ್ನಾಲ್‌ನ ಕಲ್ಪನಾ ಚಾವ್ಲಾ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಾಹನ ಗುರುತಿಸುವ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಶೋಧಿಸಲಾಗುತ್ತಿದೆ.
ಬಸ್ ಉರುಳಿ ಬಿದ್ದು ಪ್ರವಾಸಿಗರ ಸಾವು:ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಬೆಳಗ್ಗೆ ಪ್ರವಾಸಿಗರ ಬಸ್ಸೊಂದು ಮೇಲ್ಸೇತುವೆಯಿಂದ ಆಳವಾದ ಕಂದಕಕ್ಕೆ ಬಿದ್ದು 10 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬಸ್ ಅಮೃತಸರದಿಂದ ಕತ್ರಾಕ್ಕೆ ತೆರಳುತ್ತಿತ್ತು. ಈ ವೇಳೆ ಜಜ್ಜರ್ ಕೋಟ್ಲಿ ಎಂಬಲ್ಲಿ ಮೇಲ್ಸೇತುವೆಯ ಮೇಲೆ ಹೋಗುತ್ತಿದ್ದಾಗ ಆಯತಪ್ಪಿ ಉರುಳಿ ಬಿದ್ದಿದೆ. ಪ್ರವಾಸಿಗರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ವಿಷಯ ತಿಳಿದ ಪೊಲೀಸ್ ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ಹಾವು ಕಚ್ಚಿ ಮೃತಪಟ್ಟ ಮಗುವಿನ ಶವ ಹಿಡಿದುಕೊಂಡು 10 ಕಿ.ಮೀ ನಡೆದೇ ಸಾಗಿದ ತಾಯಿ!