ನುಹ್ (ಹರಿಯಾಣ):ಹರಿಯಾಣದ ನೂಹ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಫಿರೋಜ್‌ಪುರದ ಕಾಂಗ್ರೆಸ್ ಶಾಸಕ ಜಿರ್ಕಾ ಮಮ್ಮನ್ ಖಾನ್ ಅವರನ್ನು ಗುರುವಾರ ತಡರಾತ್ರಿ ನೂಹ್ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬಂಧನದ ಬೆನ್ನಲ್ಲೇ ನಗೀನಾ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಗುರುವಾರ ರಾತ್ರಿಯೇ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.
ಆದರೆ, ಸದ್ಯ ಪೊಲೀಸರು ಬಂಧನವನ್ನು ಖಚಿತಪಡಿಸಿಲ್ಲ. ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಸೇರಿದಂತೆ ಹಲವು ಬಿಜೆಪಿ ನಾಯಕರು ಮಮ್ಮನ್ ಖಾನ್ ಹಿಂಸಾಚಾರವನ್ನು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲೀಫ್ ನೀಡುವಂತೆ ಕೋರಿ ಮಮ್ಮನ್ ಖಾನ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜುಲೈ 31 ರಂದು ನೂಹ್‌ನಲ್ಲಿ ಬ್ರಜ್ ಮಂಡಲ್ ಯಾತ್ರೆಯ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ನಡೆದಿತ್ತು. ಹರ್ಯಾಣ ಎಸ್‌ಐಟಿ (ವಿಶೇಷ ತನಿಖಾ ತಂಡ) ನುಹ್ ಹಿಂಸಾಚಾರದ ತನಿಖೆ ನಡೆಸುತ್ತಿದೆ. ನೂಹ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಲು ಮುಂದಾಗಿದೆ. ಇದಕ್ಕಾಗಿ ಮಮ್ಮನಖಾನ್ಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು.
ಅನಾರೋಗ್ಯದ ಕಾರಣ ನೀಡಿ ಕಾಂಗ್ರೆಸ್ ಶಾಸಕರು ಎರಡೂ ಬಾರಿ ಎಸ್‌ಐಟಿ ಮುಂದೆ ಹಾಜರಾಗಿರಲಿಲ್ಲ. ಇದಾದ ಬಳಿಕ ಎಸ್‌ಐಟಿಯಿಂದ ಪ್ರಕರಣವನ್ನು ವರ್ಗಾಯಿಸುವಂತೆ ಕೋರಿ ಮಮ್ಮನ್‌ಖಾನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದಲ್ಲದೆ, ತನಿಖೆ ಬಾಕಿ ಇರುವಾಗ ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಂತೆ ಹರಿಯಾಣ ಪೊಲೀಸರಿಗೆ ನಿರ್ದೇಶನ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸೆಪ್ಟೆಂಬರ್ 14 ರಂದು, ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
ಈ ಹಿಂದೆ, ಆರೋಪಿ ಬಿಟ್ಟು ಬಜರಂಗಿ:ನೂಹ್ ಹಿಂಸಾಚಾರ ಪ್ರಕರಣದಲ್ಲಿ ಪೊಲೀಸರು ಆರೋಪಿ ಬಿಟ್ಟು ಬಜರಂಗಿಯನ್ನು ಮೊದಲೇ ಬಂಧಿಸಿದ್ದರು. ಬಳಿಕ ಬಿಟ್ಟು ಬಜರಂಗಿ ಜಾಮೀನಿನ ಮೇಲೆಯೇ ಇದ್ದಾರೆ. ನೂಹ್‌ನಲ್ಲಿ ಬ್ರಜ್ ಮಂಡಲ್ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. 2023ರ ಜುಲೈ 31ರಂದು, ನೂಹ್‌ನಲ್ಲಿ ಬ್ರಜ್ ಮಂಡಲ್ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಜರುಗಿತ್ತು. ಈ ಹಿಂಸಾಚಾರದಲ್ಲಿ ಇಬ್ಬರು ಗೃಹ ರಕ್ಷಕರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನೂಹ್ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ಈ ಹಿಂದೆ, ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಕರ್ನಾಟಕದ ಭಯೋತ್ಪಾದನಾ ಚಟುವಟಿಕೆಯ ಕಿಂಗ್ಪಿನ್ ಅರಾಫತ್ ಅಲಿ ದೆಹಲಿಯಲ್ಲಿ ಬಂಧಿಸಿದ ಎನ್ಐಎ