ನುಹ್: ಹರಿಯಾಣದ ನುಹ್ ಜಿಲ್ಲೆಯಲ್ಲಿ ಮಗದೊಂದು ಬಾರಿ ಸಾಮಾಜಿಕ ಜಾಲತಾಣದ (ಇಂಟರ್ನೆಟ್) ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ''ಶಾಂತಿ ನೆಲೆಗಾಗಿ ಮತ್ತು ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 26ರ ಮಧ್ಯಾಹ್ನ 12 ರಿಂದ ಆಗಸ್ಟ್ 28ರ ಮಧ್ಯರಾತ್ರಿ 12 ರವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಅಂತರ್ಜಾಲ ಮತ್ತು ಇತರ ಎಸ್ಎಂಎಸ್ ಸೇವೆಗಳು ಇರುವುದಿಲ್ಲ'' ಎಂದು ಹರಿಯಾಣದ ಗೃಹ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ನುಹ್‌ನಲ್ಲಿ ಈ ಹಿಂದೆ ಸ್ಥಗಿತಗೊಂಡಿದ್ದ ಕಾರ್ಯಕ್ರಮವನ್ನು ಇದೇ ಆಗಸ್ಟ್ 28 ರಂದು ಮತ್ತೆ ನಡೆಸಲು ಸಂಘಟನೆಯೊಂದು ಅನುಮತಿ ಪಡೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು ಶಾಂತಿ ನೆಲೆಗಾಗಿ ಎರಡು ದಿನಗಳ ಕಾಲ ಈ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಶುಕ್ರವಾರ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಜಿಲ್ಲಾಧಿಕಾರಿ ಧೀರೇಂದ್ರ ಖಡ್ಗಟ ಅವರು, ಕಾರ್ಯಕ್ರಮದ ಹಿನ್ನೆಲೆ ಎರಡು ದಿನಗಳ ಮಟ್ಟಿಗೆ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸುವಂತೆ ಶಿಫಾರಸು ಮಾಡಿದ್ದಾರೆ.
''ಇವರ ಶಿಫಾರಸು ಮೇರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವುದು ಅಗತ್ಯತೆ ಇತ್ತು. ಹಾಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ'' ಎಂದು ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಯಾವುದೇ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ವದಂತಿಗಳನ್ನು ಹರಡಬಾರದು, ಅಲ್ಲದೇ ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ಭಂಗ ತರಬಾರದೆಂದು ಸಹ ಖಡ್ಗಟ ಅವರು ಪತ್ರದಲ್ಲಿ ಉಲ್ಲೇಖ ಮಾಡಿರುವುದಾಗಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.