ಚಂಡೀಗಢ(ಹರಿಯಾಣ):ದೇಶವೇ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿದ್ದು, ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿ ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ.
ಇದೀಗ ಹರಿಯಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ತಲಾ 5 ಸಾವಿರ ರೂ. ಪರಿಹಾರ ನೀಡಲು ಮುಂದಾಗಿದೆ. ಕೋವಿಡ್ ಸೋಂಕಿನಿಂದ ಹೋಂ ಐಸೋಲೇಷನ್ಗೊಳಗಾಗಿರುವ ಕುಟುಂಬಕ್ಕೆ ಈ ಪರಿಹಾರ ನೀಡಲಾಗುವುದು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯಿಂದ ಜನತೆ ಸಂಕಷ್ಟಕ್ಕೀಡಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗೃಹ ಸಚಿವ ಅನಿಲ್ ವಿಜ್, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಔಷಧಿ ಖರೀದಿ ಮಾಡಲು 5 ಸಾವಿರ ರೂ. ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ. ಇದರ ಜತೆಗೆ ರಾಜ್ಯದಲ್ಲಿ ಕೋವಿಡ್ ಲಾಕ್ಡೌನ್ ಮತ್ತಷ್ಟು ಕಠಿಣಗೊಳ್ಳಲಿದ್ದು, ಇಂದಿನಿಂದ ಮೇ 17ರವರೆಗೂ ಅದು ಮುಂದುವರೆಯಲಿದೆ ಎಂದಿದ್ದಾರೆ.
ಕಳೆದ 24 ಗಂಟೆಯಲ್ಲಿ ಹರಿಯಾಣದಲ್ಲಿ 13,548 ಪ್ರಕರಣ ದಾಖಲಾಗಿದ್ದು, 151 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 1,16,867 ಸಕ್ರಿಯ ಪ್ರಕರಣಗಳಿವೆ.